

ಮೈಸೂರು: ನಗರದ ನೂತನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿರ್ಮಾಣ ಮಾಡಿರುವ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಪ್ರತಿಮೆ ಲೋಕಾರ್ಪಣೆ ಮಾಡಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು, ವಿವಿಧ ಸಂಘಟನೆಗಳ ಮುಖಂಡರು ಬನ್ನೂರು ರಸ್ತೆಯಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದರಿಂದ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಅರಸು ಪ್ರತಿಮೆ ನಿರ್ಮಾಣವಾಗಿ ಹಲವು ತಿಂಗಳು ಕಳೆದರೂ ಅನಾವರಣಗೊಳಿಸಿಲ್ಲ. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ನವೆಂಬರ್ ಒಂದರಂದು ಪ್ರತಿಮೆ ಅನಾವರಣಗೊಳಿಸಲು ಒತ್ತಾಯಿಸಲಾಗಿತ್ತು. ಆದರೂ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ದೂರಿದರು.
ಎಚ್.ವಿಶ್ವನಾಥ್ ಮಾತನಾಡಿ, ದೇವರಾಜ್ ಅರಸು ಅವರು ಉಳುವವರಿಗೆ ಭೂಮಿ ಕೊಟ್ಟ ದೊರೆ. ಹುಣಸೂರನ್ನು ಬಿಟ್ಟರೆ ಮೈಸೂರು ಭಾಗದಲ್ಲಿ ಎಲ್ಲಿಯೂ ಅರಸು ಪ್ರತಿಮೆ ಇಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅರಸು ಪ್ರತಿಮೆ ನಿರ್ಮಾಣಕ್ಕೆ 92 ಲಕ್ಷ ರೂ. ಅನುದಾನ ಕೊಟ್ಟಿದ್ದರಿಂದ ಪ್ರತಿಮೆಯೂ ನಿರ್ಮಾಣ ಆಗಿದೆ. ಆದರೆ ನಿರ್ಮಾಣವಾಗಿರುವ ಪ್ರತಿಮೆ ಉದ್ಘಾಟನೆಗೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನಕಲಿ ಹಿಂದುಳಿದ ವರ್ಗದ ನಾಯಕರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸಂವಿಧಾನ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ ಸಂವಿಧಾನದ ಆಶಯಕ್ಕೆ ತಕ್ಕಂತೆ ಕೆಲಸ ಮಾಡಿದ್ದು ದೇವರಾಜ ಅರಸು ಮಾತ್ರ ಎಂದರು.
ಮದುವೆ, ಬೀಗರ ಔತಣಕ್ಕೆ ಮೈಸೂರಿಗೆ ಬರುವ ಮುಖ್ಯಮಂತ್ರಿ ಅವರು ಅನಾವರಣಕ್ಕೆ ಯಾಕೆ ಬರುವುದಿಲ್ಲ. ಈ ವಿಚಾರದಲ್ಲಿ ತಾತ್ಸಾರ ಇರಬಾರದು. ಕೂಡಲೇ ಅನಾವರಣ ಮಾಡಿದರೆ ಸರ್ಕಾರಕ್ಕೆ ಗೌರವ ಸಿಗುತ್ತದೆ. ಇಲ್ಲದಿದ್ದರೆ ಅಭಿಮಾನಿಗಳೇ ಅನಾವರಣ ಮಾಡುತ್ತೇವೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅವರಿಗೆ ಮನವಿ ಸಲ್ಲಿಸಿ, ಪ್ರತಿಮೆಗೆ ಸುಣ್ಣ-ಬಣ್ಣ ಬಳಿಯುವ ಕೆಲಸವೂ ಆಗಿಲ್ಲ. ಆದ್ದರಿಂದ ಶೀಘ್ರವಾಗಿ ಈ ಕೆಲಸವನ್ನು ಮಾಡಬೇಕು. ಎರಡು ವಾರದಲ್ಲಿ ಈ ಕಾರ್ಯ ಮಾಡಿ ಶೀಘ್ರ ಪ್ರತಿಮೆ ಅನಾವರಣ ಮಾಡಬೇಕು ಎಂದರು.
ಮನವಿಯನ್ನು ಸ್ವೀಕರಿಸಿದ ಡಾ.ಪಿ.ಶಿವರಾಜು ಅವರು, ಪ್ರತಿಮೆಯ ಅನಾವರಣ ಸಂಬಂಧ ಶೀಘ್ರವೇ ಸಭೆ ನಡೆಸುವುದಾಗಿ ಭರವಸೆ ನೀಡಿದರು.ಅಮೇಲೆ ಪ್ರತಿಭಟನೆಯನ್ನು ಕೈಬಿಡಲಾಯಿತು.
ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಆರ್.ರಘು, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಕರ್ನಾಟಕ ಕಾವಲು ಪಡೆಯ ತೇಜಸ್‌ಲೋಕೇಶ್‌ಗೌಡ, ರೇಣುಕಾ, ಪ್ರೇಮ್ಕುಮಾರ್, ಹೇಮಂತ್‌ಕುಮಾರ್, ಪ್ರಶಾಂಶ್‌ಗೌಡ, ರಾಕೇಶ್, ಸುಶ್ರೂತ್ ಗೌಡ, ಮೈ.ಕಾ. ಪ್ರೇಮ್‌ಕುಮಾರ್ ಇತರರು ಇದ್ದರು.
ಅರಸು ಪ್ರತಿಮೆ ಅನಾವರಣ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿಕೆ
ಮೈಸೂರು: ನಗರದ ನೂತನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಿರ್ಮಾಣ ಮಾಡಿರುವ ಡಿ.ದೇವರಾಜ ಅರಸು ಅವರ ಪ್ರತಿಮೆಯನ್ನು ನ.3ರಂದು ಅನಾವರಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಪ್ರತಿಮೆ ಅನಾವರಣಗೊಳಿಸಬೇಕು ಎನ್ನುವ ಉದ್ದೇಶದಿಂದಾಗಿ ವಿಳಂಬವಾಗಿದೆ. ಪ್ರತಿಮೆಯನ್ನು ನಾವೇ ಅನಾವರಣ ಮಾಡಿದರೇ ಕಾರ್ಯಕ್ರಮಕ್ಕೆ ಅಷ್ಟೊಂದು ಮಹತ್ವ ಬರುವುದಿಲ್ಲ ಎಂದು ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದರು.
ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂದಿನ ಸೋಮವಾರ ಅನಾವರಣಗೊಳಿಸುತ್ತಾರೆ ಎಂದು ತಿಳಿಸಿದರು.