

ಮಂಡ್ಯ: ನಗರದ 31ನೇ ವಾರ್ಡ್‌ನ ಸ್ವರ್ಣಸಂದ್ರ, ಚಿಕ್ಕೇಗೌಡನದೊಡ್ಡಿ ಹಾಗೂ ಮಾರುತಿ ನಗರಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯನ್ನು ವಶಕ್ಕೆ ಪಡೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ಅಲ್ಲಿನ ನಿವಾಸಿಗಳು ನಗರಸಭೆ ಎದುರು ಪ್ರತಿಭಟನೆ ಮಾಡಿದರು. ನಗರದ ಗುತ್ತಲು ಬಡಾವಣೆಯಿಂದ ನಗರಸಭೆವರೆಗೂ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಎಇಇ ರವಿಕುಮಾರ್ ಅವರಿಗೆ ಮನವಿ ನೀಡಿದರು. ನಂತರ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ಮಂಡ್ಯ ನಗರ, ಗುತ್ತಲು ಮತ್ತು ಮಳವಳ್ಳಿ ರಸ್ತೆಯಲ್ಲಿ ಬರುವ ಸ್ವತ್ತಿನ ಸಂಖ್ಯೆ ಡಿ7/2563/2309/ಜಿ–4873 ಮಾಲೀಕರ ಜಾಗವನ್ನು ನಗರಸಭೆ ವಶಕ್ಕೆ ಪಡೆದು ಅನುಕೂಲ ಮಾಡಿಕೊಡಬೇಕು. ಕಳೆದ 20 ವರ್ಷದಿಂದ ಇಲ್ಲಿ ಮಾಲೀಕರು ಬೇಲಿ ಹಾಕದೇ ಸಾರ್ವಜನಿಕರಿಗೆ ಬಿಟ್ಟು ಕೊಟ್ಟಿದ್ದರು. ಆದರೆ ಏಕಾಏಕಿ ಬೇಲಿ ಹಾಕಿಕೊಂಡು ತಿರುಗಾಡುವುದಕ್ಕೆ ತೊಂದರೆ ಕೊಡುತ್ತಿದ್ದಾರೆ, ಹಾಗಾಗಿ ಈ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ನೆರವಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ವಾಸಿಮ್, ಮಂಜುನಾಥ್, ನಾಗೇಶ್, ಸೌಭಾಗ್ಯ, ಶ್ರೀಧರ್, ಮುಖಂಡರಾದ ಸತೀಶ್, ಮಂಜು, ರಾಜಣ್ಣ, ಸುಶೀಲಮ್ಮ, ಲಕ್ಷ್ಮಿ, ಇಂದ್ರಮ್ಮ, ವಸಂತ್‌ಕುಮಾರ್ ಭಾಗವಹಿಸಿದ್ದರು