

ಮದ್ದೂರು: ತಾಲೂಕಿನ ಹೊಸಕೆರೆಗೆ ಕೆಆರ್‌ಎಸ್ ಅಣೆಕಟ್ಟೆಯಿಂದ ನೀರು ಹರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಗ್ರಾಮದ ಕೆರೆಗಿಳಿದು ಪ್ರತಿಭಟನೆ ಮಾಡಿದರು.
ಹೊಸಕೆರೆಗೆ ನೀರು ಹರಿಸದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಮುಖಂಡ ಎಚ್.ಎಂ.ಮಲ್ಲೇಶ್ ಮಾತನಾಡಿ, ಕೆಆರ್‌ಎಸ್‌ನಲ್ಲಿ ನೀರು ತುಂಬಿ ತುಳುಕುತ್ತಿದ್ದರೂ ಹೊಸಕೆರೆ ಹಾಗೂ ನಿಲವಾಗಿಲು ಗ್ರಾಪಂಗಳ ಕೆರೆಗಳಿಗೆ ನೀರು ತುಂಬಿಸದೆ ಅಧಿಕಾರಿಗಳು ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರು ಹರಿಸದ ಹಿನ್ನೆಲೆಯಲ್ಲಿ ರೈತರು ಹಾಕಿದ್ದ ಭತ್ತದ ವಟ್ಲು ಒಣಗುತ್ತಿದೆ ಹಾಗೂ ಇನ್ನಿತರ ಕೃಷಿ ಚಟುವಟಿಕೆಯನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಿದ್ದಾರೆ ಹೊರತು ನೀರು ಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಕಳೆದ ವರ್ಷ ಮಳೆ ಇಲ್ಲದ ಪರಿಣಾಮ ಕೆರೆಗಳಿಗೆ ನೀರು ಹರಿಸಿಲ್ಲ. ಈ ವರ್ಷ ಉತ್ತಮ ಮಳೆಯಾಗಿ ಕೆಆರ್‌ಎಸ್ ಜಲಾಶಯಯದಲ್ಲಿ ನೀರು ಇದ್ದರೂ ನೀರು ಹರಿಸದ ಪರಿಣಾಮ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು.
ಈ ಭಾಗದ ಕೆರೆ, ಕಟ್ಟೆಗಳಿಗೆ ನೀರು ಹರಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೀನ ಮೇಷ ಎಣಿಸುತ್ತಿರುವುದು ರೈತ ವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತರಿಗೆ ಬರಬೇಕಾದ ಬರ ಪರಿಹಾರ ಬಂದಿಲ್ಲ. ಇದರಿಂದ ರೈತರಿಗೆ ಸಮಸ್ಯೆಯಾಗಿದೆ ಹಾಗೂ ಹೊಸಕೆರೆಗೆ ಹೊಸದಾಗಿ ತೂಬು ನೀಡುವಂತೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಹಣವಿಲ್ಲ ಎಂದು ಉಡಾಫೆಯಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಹೊಸಕೆರೆ ಗ್ರಾಮದ ಕೆರೆಗೆ ನೀರು ಬಂದರೆ, ಸುಮಾರು 500 ಎಕರೆ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ. ಆದ್ದರಿಂದ ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಂಡು ನೀರು ಹರಿಸಲು ಮುಂದಾಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಎಚ್‌ಆರ್‌ಬಿಸಿ ನಾಲೆಯ ನೀರು ಬಳಕೆದಾರರ ಸಂಘದ ಅಧ್ಯಕ್ಷ ಶಿವಮಾದಯ್ಯ, ಗ್ರಾಮದ ಮುಖಂಡರಾದ ಎಚ್.ಎಂ.ಮಲ್ಲೇಶ್, ಎಚ್.ಸಿ.ರಾಮು, ಶಿವಣ್ಣ, ರಾಮಕೃಷ್ಣ, ಶಿವ ಮಾದಯ್ಯ, ಪುಟ್ಟಸ್ವಾಮಿ, ಅಪ್ಪಾಜಿ ,ಗೋಪಾಲ್, ಮಾಲಿಂಗೇಗೌಡ, ಎಚ್.ಎಂ.ರಾಮು, ಚಂದ್ರು, ಎಚ್.ಎಸ್.ಲೋಕೇಶ್, ಎಚ್.ಪಿ.ಕೃಷ್ಣಪ್ಪ, ಶಿವಣ್ಣ, ಬಾಲರಾಜ್, ಸುರೇಶ್, ಬೋರೇಗೌಡ, ಎಚ್.ಪಿ.ವಿಜೇಂದ್ರ ಭಾಗವಹಿಸಿದ್ದರು.