

ಮೈಸೂರು: ಕಾವೇರಿ, ಕಬಿನಿ ಅಚ್ಚುಕಟ್ಟು ಭಾಗದ ಕೆರೆಗಳು ಒಣಗಿದ್ದು ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲ, ಬೆಳೆಗಳು ಹಾಳಾಗುತ್ತಿವೆ. ಹೀಗಾಗಿ ಕೂಡಲೇ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಬುಧವಾರ ಕಾಡಾ ಕಚೇರಿಯಲ್ಲಿನ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಕಾಡಾ ಕಚೇರಿಯಲ್ಲಿ ಸಮಾವೇಶಗೊಂಡ ರೈತರು, ನೀರು ಹರಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ದಕ್ಷಿಣ ವಲಯ ನೀರಾವರಿ ಇಲಾಖೆ ಉಪಮುಖ್ಯ ಇಂಜಿನಿಯರ್ ಗೌತಮ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು. ಮೂರು ದಿನದ ಒಳಗೆ ನೀರು ಹರಿಸುವ ನಿರ್ಧಾರ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ತಮಿಳುನಾಡಿನ ಮುಖ್ಯಮಂತ್ರಿಗಳ ಬಾಂಧವ್ಯಕ್ಕೆ ತಲೆಬಾಗಿ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಕಾವೇರಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಿ ಜಲಾಶಯ ಖಾಲಿ ಮಾಡಿದ್ದರಿಂದ ಬೆಂಗಳೂರು ನಿವಾಸಿಗಳು, ಕಾವೇರಿ ಅಚ್ಚುಕಟ್ಟು ಭಾಗದ ರೈತರು ನೀರಿನ ಸಮಸ್ಯೆಗೆ ಬಲಿಯಾಗಿದ್ದಾರೆ. ಅಚ್ಚುಕಟ್ಟು ಭಾಗದ ಕೆರೆಕಟ್ಟೆಗಳು ಒಣಗಿ ಹೋಗಿವೆ. ಜನ, ಜಾನುವಾರುಗಳು ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. ಸರ್ಕಾರ ಕೂಡಲೇ ನಾಲೆಗಳಿಗೆ ನೀರು ಹರಿಸಿ ರೈತರು, ಜಾನುವಾರುಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.