ಜಿಲ್ಲೆಯ ನಾಲೆಗೆ ನೀರು ಹರಿಸಲು ಒತ್ತಾಯ: ಮುಂದುವರೆದ ರೈತ ಹಿತರಕ್ಷಣಾ ಸಮಿತಿ ಪ್ರತಿಭಟನೆ

Protest demanding to drain the water to the canal mandya
oppo_0
Published on

ಮಂಡ್ಯ: ಕಾವೇರಿ ನೀರಿನ ವಿಚಾರದಲ್ಲಾಗುತ್ತಿರುವ ಅನ್ಯಾಯ ಖಂಡಿಸಿ ಹಾಗೂ ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಕೂಡಲೇ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ನಡೆಸುತ್ತಿರುವ ಪ್ರತಿ ಸೋಮವಾರದ ಪ್ರತಿಭಟನೆ 13ನೇ ವಾರವೂ ಮುಂದುವರೆಯಿತು.

ನಗರದ ಸರ್‌ಎಂವಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಡಾ.ಕುಮಾರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಮಳೆ ಅಭಾವದಿಂದ ಬೆಳೆ ನಷ್ಟಕ್ಕೀಡಾದ ರೈತರಿಗೆ ಸರ್ಕಾರ ಬೆಳೆ ಪರಿಹಾರ ಪಾವತಿ ಮಾಡಿದೆ. ಜಿಲ್ಲೆಯ 71,000 ರೈತರಿಗೆ 14 ಕೋಟಿ ರೂ ಬೆಳೆ ನಷ್ಟ ಪರಿಹಾರವನ್ನು ಪಾವತಿ ಮಾಡಲಾಗಿದೆ ಎಂಬ ಮಾಹಿತಿಯನ್ನು ಜಿಲ್ಲಾಡಳಿತ ನೀಡಿದೆ. ಆದರೆ ಯಾವೊಬ್ಬ ರೈತರು ಪರಿಹಾರ ದೊರಕಿರುವ ಬಗ್ಗೆ ಖಾತ್ರಿ ಮಾಡಿಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ನೀರಿನ ಅಭಾವದಿಂದ 3,600 ಕೋಟಿ ರೂ ಬೆಳೆ ನಷ್ಟವಾಗಿರುವ ಬಗ್ಗೆ ಅಂದಾಜು ಮಾಡಲಾಗಿತ್ತು. ಇದೀಗ ಅದರ ಮೊತ್ತ 5000 ಕೋಟಿ ರೂಗೆ ಹೆಚ್ಚಳವಾಗಿದೆ. ಸರ್ಕಾರ ನೀಡಲಾಗಿದೆ ಎಂದು ಹೇಳುತ್ತಿರುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಬರ ಪರಿಸ್ಥಿತಿಯಿಂದ ಭೂಮಿ ಬಾಯಿ ಬಿಟ್ಟಿದೆ. ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ನಾಲೆಗಳಿಗೆ ನೀರು ಹರಿಸಿ ಎಂದು ಒತ್ತಡ ಮಾಡುತ್ತಿದ್ದರೂ, ಸರ್ಕಾರ ಮೌನ ವಹಿಸಿದೆ. ಚಿಕ್ಕದೇವರಾಯ ನಾಲೆ, ರಾಮಸ್ವಾಮಿ ನಾಲೆಗೆ ನೀರು ಹರಿಸಿದ್ದರೂ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ ವಿಶ್ವೇಶ್ವರಯ್ಯ ನಾಲೆಗೆ ಈ ತಕ್ಷಣ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿದರು.

ಜೂನ್‌ನಲ್ಲಿ ಮೈಸೂರು ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಆರಂಭಿಸಬೇಕು. ಆದರೆ ಈ ಬಗ್ಗೆ ಪೂರ್ವ ಸಿದ್ಧತೆ ಕೈಗೊಂಡಿಲ್ಲ. ಅಲ್ಲಿನ ವ್ಯವಸ್ಥಾಪಕ ನಿರ್ದೇಶಕರು ನಿರ್ಲಕ್ಷೃ ತೋರಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದ್ದು, ಆದಷ್ಟು ಶೀಘ್ರವಾಗಿ ಸಭೆ ಕರೆದು ಚರ್ಚೆಗೆ ಕಾರ್ಖಾನೆ ಆರಂಭಕ್ಕೆ ತುರ್ತು ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕನ್ನಡಸೇನೆ ಮಂಜುನಾಥ್, ಕೃಷ್ಣಪ್ರಕಾಶ್, ಕರವೇ ಶಂಕರೇಗೌಡ, ತಾಯಮ್ಮ, ಮೊತ್ತಹಳ್ಳಿ ಕೆಂಪೇಗೌಡ, ಫಯಾಜ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net