

ಮಡಿಕೇರಿ: ವಕ್ಛ್ ಮಸೂದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ನಗರದ ಇಂದಿರಗಾಂಧಿ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಇಂದಿರಗಾಂಧಿ ವೃತ್ತದಲ್ಲಿ ಜಮಾಯಿಸಿದ ಪಕ್ಷದ ಪ್ರಮುಖರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕರ್, ಕೇಂದ್ರದ ಎನ್‌ಡಿಎ ಸರ್ಕಾರ ಆ.೮ರಂದು ಪಾರ್ಲಿಮೆಂಟ್‌ನಲ್ಲಿ ವಕ್ಛ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದೆ. ತೀವ್ರ ವಿರೋಧದ ನಡುವೆಯೇ ಜಂಟಿ ಪಾರ್ಲಿಮೆಂಟಿನ ಸಮಿತಿಗೆ ಒಪ್ಪಿಸಲಾಗಿದೆ. ಇದು ಸಂವಿಧಾನ ವಿರೋಧಿಯಾಗಿದ್ದು, ತೀವ್ರವಾಗಿ ಖಂಡಿಸಲಾಗುವುದು ಎಂದರು.
ವಕ್ಛ್ ಆಸ್ತಿಯು ಸರ್ಕಾರ ಮಂಜೂರು ಮಾಡಿದ ಆಸ್ತಿಯಲ್ಲ. ಮುಸ್ಲಿಂ ಸಮುದಾಯದ ಗಣ್ಯ ವ್ಯಕ್ತಿಗಳು ಸಮುದಾಯದ ಉನ್ನತಿಗಾಗಿ ದಾನವಾಗಿ ನೀಡಿದ್ದು. ಆದ್ದರಿಂದ ತಿದ್ದುಪಡಿ ಮಸೂದೆ ಜಾರಿಗೊಳಿಸಲು ಬಿಡುವುದಿಲ್ಲ ಎಂದಿರುವ ಅಬ್ದುಲ್ ಅಡ್ಕರ್, ವಕ್ಛ್ ಆಸ್ತಿಯನ್ನು ಕಬಳಿಸಿಕೊಂಡು ಬಂಡವಾಳಶಾಹಿಗಳಿಗೆ ಮಾರಾಟ ಮಾಡುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಪಕ್ಷದ ಜಿಲ್ಲಾ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ, ವಕ್ಛ್ ಮಸೂದೆ ಕಾನೂನು ಬದ್ಧವಾಗಿ ಜಾರಿಯಲ್ಲಿರುವಾಗ ವಕ್ಛ್ ತಿದ್ದುಪಡಿ ಮಸೂದೆ ಜಾರಿಗೊಳಿಸುವ ಅವಶ್ಯಕತೆಯಿಲ್ಲ. ಪೂರ್ಣ ಬಹುಮತದ ಸರ್ಕಾರ ರಾಜ್ಯದಲ್ಲಿ ಅಧಿಕಾರ ಬಂದಿದ್ದು, ಶೇ.೯೫ರಷ್ಟು ಮುಸಲ್ಮಾನರು ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳದೆ ಮಸೂದೆಯ ವಿರುದ್ಧ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕೆಂದು ಆಗ್ರಹಿಸಿದರು.
ಎನ್‌ಡಿಎ ಮೈತ್ರಿ ಕೂಟದ ಪಕ್ಷಗಳೇ ಇದರ ವಿರುದ್ಧವಾಗಿದೆ. ತಿದ್ದುಪಡಿ ಮಸೂದೆ ಹಿಂಪಡೆಯದಿದ್ದರೆ ಸರ್ಕಾರ ಅಸ್ಥಿರತೆಗೆ ತಲುಪುತ್ತದೆ. ಕಾನೂನುಬದ್ಧ ಹೋರಾಟದ ಜತೆಗೆ ದೇಶವ್ಯಾಪಿ ಬೀದಿಗಿಳಿದು ಶಾಂತಿಯುತ ಹೋರಾಟ ನಡೆಲಾಗುವುದೆಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ನಗರಸಭೆ ಸದಸ್ಯ ಮನ್ಸೂರ್ ಆಲಿ, ಪಕ್ಷದ ನಗರಾಧ್ಯಕ್ಷ ರಿಜ್ವಾನ್, ಜಾಮಿಯಾ ಮಸೀದಿ ಮಾಜಿ ಅಧ್ಯಕ್ಷ ನಸೀರ್ ಅಹಮ್ಮದ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.