

ಹಾಸನ: ನಮ್ಮ ಜೀವನಾಧಾರ ಕಲ್ಲು ಕ್ವಾರಿ. ಗಣಿಗಾರಿಕೆ ಮರು ಆರಂಭಿಸಿ, ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಭೋವಿ ಮಹಾಸಭಾ, ಬಹುಜನ ದಲಿತ ಸಂಘರ್ಷ ಸಮಿತಿ, ಕರ್ನಾಟಕ ಕಾರ್ಮಿಕ ಸೇನೆ, ರೈತೋದಯ ಹಸಿರು ಸೇನೆ ಹಾಗೂ ದಲಿತಪರ ಹೋರಾಟ ಒಕ್ಕೂಟದಿಂದ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಭೋವಿ ಮಹಾಸಭಾದ ಅಧ್ಯಕ್ಷ ಎಚ್. ಮಂಜಪ್ಪ ಮಾತನಾಡಿ, ಆಲೂರು ತಾಲೂಕಿನ ಕೆ.ಹೊಸಕೋಟೆ ಹೋಬಳಿಯ ಕಾರಗೋಡು ಗ್ರಾಮದ ವೈ.ಎನ್.ಪುರ ಪ್ರದೇಶದಲ್ಲಿ ವಾಸಿಸುತ್ತಿರುವ ಭೋವಿ ಜನಾಂಗದ ಸುಮಾರು 350-400 ಜನ ತಮ್ಮ ಪಾರಂಪರಿಕ ಕುಲಕಸುಬಾದ ಕಲ್ಲು ಗಣಿಗಾರಿಕೆಯಿಂದ ಜೀವನ ನಡೆಸುತ್ತಿದ್ದಾರೆ. 2013-14ರಲ್ಲೇ ಸಂಘವನ್ನು ಕಾನೂನುಬದ್ಧವಾಗಿ ನೋಂದಾಯಿಸಿಕೊಂಡು, ಗಣಿಗಾರಿಕೆ ಪರವಾನಿಗೆ ಪಡೆದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಾವಳಿಯಂತೆ ರಾಜಧನ ಪಾವತಿಸಿ ಮಾನವ ಶ್ರಮದಿಂದ ಕಟ್ಟಡ ಕಲ್ಲುಗಳನ್ನು ತಯಾರಿಸುತ್ತಾ ಕುಟುಂಬಗಳನ್ನು ನಡೆಸುತ್ತಿದ್ದಾರೆ. ಆದರೆ 9 ತಿಂಗಳುಗಳಿಂದ ಗಣಿಗಾರಿಕೆ ತಾತ್ಕಾಲಿಕವಾಗಿ ತಡೆಗಟ್ಟಿರುವುದರಿಂದ ಸುಮಾರು 70-80 ದಲಿತ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ದಲಿತ ಹಿರಿಯ ಮುಖಂಡ ಆರ್‌ಪಿಐ ಸತೀಶ್, ಕೃಷ್ಣದಾಸ್, ಭೀಮ್ ಆರ್ಮಿ ಸಂಘಟನೆ ಜಿಲ್ಲಾಧ್ಯಕ್ಷ ರಾಜೇಶ್, ಅಂಬೂಗ ಮಲ್ಲೇಶ್, ಚೇತನ್, ನವೀನ್, ಶಿವರಾಜು, ಸೀನ, ಮಹಾದೇವ, ಚೀದಾನಂದ್, ಪರಮೇಶ್, ಆರ್ಮುಗನ್ ಇತರರು ಇದ್ದರು.