

ಮೈಸೂರು: ನಗರದ ಗನ್‌ಹೌಸ್ ವೃತ್ತದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿರುವ ಪ್ರತಿಮೆಯನ್ನು ತೆರವು ಮಾಡಬೇಕು ಎಂದು ಕಾನೂನು ಬಾಹಿರ ಪ್ರತಿಮೆ ತೆರವು ಹೋರಾಟ ಸಮಿತಿ ವತಿಯಿಂದ ಶುಕ್ರವಾರವೂ ಪ್ರತಿಭಟನೆ ನಡೆಯಿತು.
ಡಿ.ದೇವರಾಜ ಅರಸು ರಸ್ತೆಯಿಂದ ಹಳೇ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ಮೂಲಕ ಬಂದ ಪ್ರತಿಭಟನಾಕಾರರು, ರಸ್ತೆಯಲ್ಲೇ ಧರಣಿ ಕುಳಿತರು.
ಗನ್‌ಹೌಸ್ ವೃತ್ತದಲ್ಲಿ ಪ್ರತಿಮೆಯನ್ನು ಅಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ಇಡಲಾಗಿದೆ. ಈ ಪ್ರತಿಮೆಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಘೋಷಣೆ ಕೂಗಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಸರ್ಕಾರದ ಅನುಮತಿ ಇದ್ದರೆ ಏಕೆ ರಾತ್ರೋರಾತ್ರಿ ಪ್ರತಿಮೆಯನ್ನು ಇಡಲಾಯಿತು? ಕಾನೂನು ಪ್ರಕಾರವೇ ಇದು ಆಗಿದ್ದರೆ ಏಕೆ ದಾಖಲಾತಿಗಳನ್ನು ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.
ಈ ಪ್ರತಿಮೆ ನಿರ್ಮಾಣದಿಂದ ಏಳು ರಸ್ತೆಗಳು ಸೇರುವ ವೃತ್ತದಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಇದನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಅರಸು ಮಂಡಳಿ ಅಧ್ಯಕ್ಷ ಎಚ್.ಎಂ.ಟಿ.ಲಿಂಗರಾಜು, ಕರುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ಕಾ.ಪ್ರೇಮ್‌ಕುಮಾರ್, ಒಕ್ಕಲಿಗರ ಸಂಘದ ಯಮುನಾ, ದಸಂಸ ಮುಖಂಡರಾದ ಕೆ.ವಿ.ದೇವೇಂದ್ರ, ನಟರಾಜ್ ಹಾರೋಹಳ್ಳಿ, ಶಿವಮೂರ್ತಿ ಶಂಕರಪುರ, ಹಗಿನವಾಳು ಪ್ರಭುಸ್ವಾಮಿ, ವಿಕ್ರಾಂತ್ ಚಿಕ್ಕಲಿಂಗಯ್ಯ, ಅರಸನಕೆರೆ ಶಿವರಾಜ್, ಪಡುವಾರಹಳ್ಳಿ ಸತೀಶ್, ತಗಡೂರು ಲಿಂಗಯ್ಯ, ಬೊಮ್ಮಹಳ್ಳಿ ಮಹದೇವ್, ಆಲನಹಳ್ಳಿ ಸಿದ್ದರಾಜು, ಬಿಳಿಕೆರೆ ದೇವರಾಜ್, ಸೋಮನಾಯಕ, ಅಣ್ಣಯ್ಯ ಭಾಗವಹಿಸಿದ್ದರು.