ಹಾಲಿನ ಪ್ರೋತ್ಸಾಹಧನ ಬಿಡುಗಡೆಗೆ ಒತ್ತಾಯ: ರೈತರ ಕ್ಷೇಮಾಭಿವೃದ್ಧಿ ಸಂಘ, ಪ್ರಾಂತ ರೈತ ಸಂಘದಿಂದ ಪ್ರತಿಭಟನೆ

Protest demanding the release of milk subsidy Mandya
Published on

ಮಂಡ್ಯ: ರಾಜ್ಯಸರ್ಕಾರ ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹಧನ ಬಿಡುಗಡೆಗೆ ಒತ್ತಾಯಿಸಿ ಹಾಲು ಉತ್ಪಾದಕರ ರೈತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ಬಾಕಿ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಂತೆಯೇ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮೂಲಕ ರಾಜ್ಯಸರ್ಕಾರ ಹಾಗೂ ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಕೃಷಿ ಕ್ಷೇತ್ರದಲ್ಲಿ ಹೈನುಗಾರಿಕೆ ಪ್ರಮುಖ ಪಾತ್ರ ವಹಿಸುತ್ತಿವೆ. ಮಾತ್ರವಲ್ಲದೆ ಬಹಳಷ್ಟು ರೈತ ಕುಟುಂಬಕ್ಕೆ ಆರ್ಥಿಕ ಮೂಲವೂ ಆಗಿದೆ. ರಾಜ್ಯದ ಕೆಎಂಎಫ್‌ನಡಿಯಲ್ಲಿ 15 ಒಕ್ಕೂಟಗಳಿದ್ದು, 14,900 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರಿ ಸಂಘದ ಮೂಲಕ 22.5 ಲಕ್ಷ ಸದಸ್ಯರು ಪ್ರತಿದಿನ ಒಂದು ಕೋಟಿ ಲೀಟರ್‌ನಷ್ಟು ಹಾಲನ್ನು ಪೂರೈಕೆ ಮಾಡುತ್ತಿದ್ದಾರೆ. ಆದರೆ ದಿನದಿಂದ ದಿನಕ್ಕೆ ಪಶುಆಹಾರದ ಬೆಲೆ ಏರಿಕೆ, ಪಶುಗಳ ಖರೀದಿ ದರ, ನಿರ್ವಹಣೆಯಿಂದಾಗಿ ಹೈನುಗಾರಿಕೆ ಕ್ಷೇತ್ರ ಕಷ್ಟಕ್ಕೆ ಸಿಲುಕಿಸಿದೆ. ಹೀಗಿರುವಾಗ ರಾಜ್ಯಸರ್ಕಾರದಿಂದ ಪ್ರೋತ್ಸಾಹ ಸಿಗದಿರುವುದು ಬೇಸರ ತರಿಸಿದೆ ಎಂದರು.

ಈ ಹಿನ್ನೆಲೆಯಲ್ಲಿ ಬಾಕಿ ಇರುವ ಪ್ರೋತ್ಸಾಹಧನವನ್ನು ರಾಜ್ಯಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ಮಾತ್ರವಲ್ಲದೆ ಪ್ರೋತ್ಸಾಹಧನ 5 ರೂ ಬದಲಿಗೆ 10 ರೂ ನೀಡಬೇಕು. ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಪ್ರತಿ ಲೀಟರ್ ಹಾಲಿಗೆ 50 ರೂ ನಿಗದಿಗೊಳಿಸಬೇಕು. ಹಾಲು ಉತ್ಪಾದಕರ ಮಕ್ಕಳಿಗೆಂದು ಕೆಎಂಎಫ್‌ನಿಂದ ಪ್ರತಿ ಜಿಲ್ಲೆಗೊಂದು ವಸತಿ ನಿಲಯ ಪ್ರಾರಂಭಿಸಬೇಕು. ಪಶು ಆಹಾರಗಳ ಗುಣಮಟ್ಟ ಕಾಯ್ದುಕೊಳ್ಳುವುದರ ಜತೆಗೆ ಬೆಲೆ ಇಳಿಸಿ ಸಹಾಯಧನವನ್ನು ನೀಡಬೇಕು. ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟ ಕೇಂದ್ರನ್ನು ಹೆಚ್ಚಿಸಬೇಕು. ಹಾಲಿನ ಉತ್ಪನ್ನ ಹಾಗೂ ಯಂತ್ರೋಪಕರಣಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಬೇಕು. ಹೈನುಗಾರಿಕೆ ನಡೆಸಲು ರಾಜ್ಯಸರ್ಕಾರ ಸಬ್ಸಿಡಿ ಸಹಿತ ಸಾಲ ನೀಡಬೇಕು. ಪ್ರಾಥಮಿಕ ಸಹಕಾರ ಸಂಘದಲ್ಲಿ ದುಡಿಯುವ ನೌಕರರಿಗೆ ಕೆಲಸದ ಭದ್ರತೆ ಸೇರಿದಂತೆ ಸೌಲಭ್ಯ ಖಾತ್ರಿ ಮಾಡಬೇಕು. ಡೇರಿಗಳಲ್ಲಿ ನೇಮಕಾತಿ, ಟೆಂಡರ್ ಹೆಸರಿನಲ್ಲಿ ಹಾಗೂ ಇತರೆ ವಿಚಾರದಲ್ಲಿ ಭ್ರಷ್ಟಾಚಾರ ತಡೆಗಟ್ಟಬೇಕು. ಆನ್‌ಲೈನ್ ಮಾದರಿಯಲ್ಲಿ ಹಾಲು ಖರೀದಿ ಹಾಗೂ ಲೆಕ್ಕನಿರ್ವಹಣೆ ಬಗ್ಗೆ ರೈತರಿಗೆ ಸರಿಯಾಗಿ ಮಾಹಿತಿ ಒದಗಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್, ಕಾರ್ಯದರ್ಶಿ ಲಿಂಗರಾಜಮೂರ್ತಿ, ಸಹ ಸಂಚಾಲಕರಾದ ಎಸ್.ವಿಶ್ವನಾಥ್, ಟಿ.ಆರ್.ಸಿದ್ದೇಗೌಡ, ನಾಗಮ್ಮ, ಮಹದೇವು, ಗುರುಸ್ವಾಮಿ, ರಾಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net