

ಮೈಸೂರು: ಏಕಾಏಕಿ ಕೆಲಸದಿಂದ ವಜಾಗೊಳಿಸಿರುವ ಮಹಿಳಾ ಕಾರ್ಮಿಕರನ್ನು ಮರು ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಸೀ ಟೀ ಸಿಲ್ಕ್ (ಚಾಮುಂಡಿ ಟೆಕ್ಸ್‌ಟೈಲ್ ಘಟಕ) ಕಾರ್ಮಿಕರು ಬುಧವಾರ ಪ್ರತಿಭಟನೆ ಆರಂಭಿಸಿದರು.
ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆ ಆಡಳಿತ ವರ್ಗ, ಸಿಲ್ಕ್ ದಾರದ ಉಂಡೆ ತಯಾರಿಸುವ ಚಾಮುಂಡಿ ಟೆಕ್ಸ್‌ಟೈಲ್ ಘಟಕದ ಸೀ ಟೀ ಸಿಲ್ಕ್ ಅನ್ನು ಯಾವುದೇ ಮುನ್ಸೂಚನೆ ನೀಡದೆ ಫೆಬ್ರವರಿ 15ರಿಂದ ಮುಚ್ಚಿದೆ. ಇದರಿಂದ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ 16 ಮಹಿಳಾ ಕಾರ್ಮಿಕರು ತೊಂದರೆ ಒಳಗಾಗಿದ್ದಾರೆ ಎಂದು ದೂರಿದರು.
ಅಲ್ಲದೆ ಘಟಕದಲ್ಲಿದ್ದ ಯಂತ್ರೋಪಕರಣಗಳನ್ನು ಮಾತೃ ಸಂಸ್ಥೆ ಚಾಮುಂಡಿ ಟೆಕ್ಸ್‌ಟೈಲ್‌ಗೆ ಸ್ಥಳಾಂತರಗೊಳಿಸಲಾಗಿದೆ. ಉಳಿದ ಯಂತ್ರಗಳನ್ನು ಸ್ಥಳಾಂತರ ಮಾಡದಂತೆ ಕಾರ್ಮಿಕರು ತಡೆದಿದ್ದಾರೆ. ಹಾಗಾಗಿ ಘಟಕವನ್ನು ಪುನಾರಂಭಿಸಬೇಕು. ಇಲ್ಲವೇ ಮಾತೃ ಸಂಸ್ಥೆ ಚಾಮುಂಡಿ ಟೆಕ್ಸ್‌ಟೈಲ್‌ನಲ್ಲಿ ಕೆಲಸ ಕಳೆದುಕೊಂಡಿರುವ 16 ಮಹಿಳಾ ಕಾರ್ಮಿಕರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಮೈಸೂರು ವಿಭಾಗ ಕೈಗಾರಿಕಾ ಕಾರ್ಮಿಕರ ಮಹಾ ಸಂಘ (ಎಂಡಿಐಡಬ್ಯುಜಿಯು)ನ ಪ್ರಧಾನ ಕಾರ್ಯದರ್ಶಿ ಎನ್.ಕೆ.ದೇವದಾಸ್, ಘಟಕದ ಅಧ್ಯಕ್ಷೆ ಚಂದ್ರಮ್ಮ, ಕಾರ್ಯದರ್ಶಿ ವಿ.ಗೀತಾ, ಖಜಾಂಚಿ ಲಲಿತಾ, ಸಂಘಟನೆ ಮುಖಂಡರಾದ ಶೇಷಾದ್ರಿ, ಸೋಮಸುಂದರ್ ಇತರರು ಇದ್ದರು.