ಎಲ್ಲ ಶಾಲೆಯಲ್ಲೂ ಕನ್ನಡ ಕಡ್ಡಾಯಗೊಳಿಸಲಿ: ಕರವೇ (ಶಿವರಾಮೇಗೌಡ) ಬಣದ ಒತ್ತಾಯ

Protest demanding the implementation of the bilingual education policy Mandya
Published on

ಮಂಡ್ಯ: ದ್ವಿಭಾಷಾ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದು ಹಾಗೂ ಸರ್ಕಾರಿ ಮತ್ತು ಖಾಸಗಿ ಶಾಲೆಯಲ್ಲಿ ಕನ್ನಡ ಕಡ್ಡಾಯಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರವೇ (ಶಿವರಾಮೇಗೌಡ) ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು, ಆಹಾರ ಇಲಾಖೆ ಉಪನಿರ್ದೇಶಕ ಕೃಷ್ಣಕುಮಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಮಾತನಾಡಿ, ನಮ್ಮ ಮಕ್ಕಳ ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಅನುಷ್ಠಾನ ಬಹುಮುಖ್ಯವಾಗಿದೆ. ಭಾಷಾ ಸಮತೋಲನಕ್ಕಾಗಿ ಕನ್ನಡವನ್ನು ಮೊಟ್ಟಮೊದಲು ಉಳಿಸಿಕೊಂಡು ಆಂಗ್ಲದಂತಹ ಜಾಗತಿಕ ಭಾಷೆಯಲ್ಲಿ ಮಕ್ಕಳಿಗೆ ಸಾಧನೆ ಮಾಡಲು ಅವಕಾಶ ನೀಡಬೇಕು. ಕನ್ನಡದಲ್ಲಿ ಶಾಲಾಭ್ಯಾಸದಿಂದ ಮಕ್ಕಳಲ್ಲಿ ತಮ್ಮ ಸಂಸ್ಕೃತಿ, ಇತಿಹಾಸ, ಮೌಲ್ಯವನ್ನು ಅರಿಯುವಂತೆ ಮಾಡುತ್ತದೆ. ಜತೆಗೆ ಆಂಗ್ಲದಂತಹ ಇನ್ನೊಂದು ಭಾಷೆ ಅವರ ವೃತ್ತಿಪರತೆಯನ್ನು ವಿಶಾಲಗೊಳಿಸುತ್ತದೆ. ಎರಡೂ ಭಾಷೆಯಲ್ಲಿ ಪ್ರಾವೀಣ್ಯತೆ, ಮಕ್ಕಳ ಆಲೋಚನೆ, ಅರ್ಥಗ್ರಹಿಕೆ ಹಾಗೂ ಅಭಿವ್ಯಕ್ತಿಯ ಶಕ್ತಿಯನ್ನು ವೃದ್ಧಿಸುತ್ತದೆ. ಹಲವು ಮುಂದುವರೆದ ರಾಷ್ಟ್ರಗಳು ದ್ವಿಭಾಷಾ ಶಿಕ್ಷಣವನ್ನು ಉತ್ತೇಜಿಸುತ್ತಿವೆ. ಇದರೊಂದಿಗೆ ಮಕ್ಕಳ ವಿದ್ಯಾಭ್ಯಾಸದ ಮಟ್ಟವನ್ನು ಜಾಗತಿಕವಾಗಿ ಬಲಪಡಿಸುತ್ತಿದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಯಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು. ಕನ್ನಡದ ಜತೆಗೆ ಇನ್ನೊಂದು ಆಯ್ಕೆ ಭಾಷೆಯನ್ನು ಕಲಿಸುವ ವ್ಯವಸ್ಥೆಯನ್ನು ಪಠ್ಯಪುಸ್ತಕಗಳ ಸಹಾಯದಿಂದ ಸದೃಢಗೊಳಿಸಬೇಕು. ದ್ವಿಭಾಷಾ ನೀತಿಯ ಬಗ್ಗೆ ಸ್ಪಷ್ಟ ನೀತಿ ನಿರ್ಧಾರ ಮತ್ತು ಅನುಷ್ಠಾನ ಚಟುವಟಿಕೆಗಳ ಪಟ್ಟಿ ಪ್ರಕಟಿಸಬೇಕು. ಒಟ್ಟಾರೆ ನಮ್ಮ ಕರ್ನಾಟಕ, ನಮ್ಮ ಭಾಷೆ, ನಮ್ಮ ಭವಿಷ್ಯ ಎಂಬ ಧ್ಯೇಯದೊಂದಿಗೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಮತ್ತು ರಾಜ್ಯದ ಭಾಷಾ ಗೌರವ ಕಾಪಾಡಲು ದ್ವಿಭಾಷಾ ನೀತಿಯನ್ನು ತ್ವರಿತವಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರವೇ ಜೋಸೆಫ್, ಮುದ್ದೇಗೌಡ, ಪ್ರವೀಣ, ಅಭಿಷೇಕ, ಸಂಜು ಆಲಕೆರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net