ಸದಾಶಿವ ಆರೋಗದ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

11adarshkdga7
Published on

ಮಡಿಕೇರಿ: ನ್ಯಾಯಮೂರ್ತಿ ಸದಾಶಿವ ಆರೋಗದ ವರದಿಯನ್ನು ತಕ್ಷಣವೇ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿ (ಪ್ರೊ.ಬಿ ಕೃಷ್ಣಪ್ಪ ಸ್ಥಾಪಿತ) ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಡಿಕೇರಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಮಿತಿಯ ಪ್ರಮುಖರು ಹಾಗೂ ಪದಾಧಿಕಾರಿಗಳು ಬೇಡಿಕೆಯ ಈಡೇರಿಕೆಗಾಗಿ ಆಗ್ರಹಿಸಿದರು.


ಈ ಸಂದರ್ಭ ಸಮಿತಿಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ಮಾತನಾಡಿ, ನ್ಯಾಯಮೂರ್ತಿ ಸದಾಶಿವರವರು ಏಳು ವರ್ಷಕ್ಕೂ ಹೆಚ್ಚುಕಾಲ ಪರಿಶಿಷ್ಟ ಜಾತಿಗಳ ಸಾಮಾಜಿಕ ಶೈಕ್ಷಣಿಕ ಮತ್ತು ಉದ್ಯೋಗದ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ೨೦೧೨ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ವರದಿ ಸಲ್ಲಿಕೆಯಾಗಿ ೧೦ ವರ್ಷಗಳೇ ಕಳೆದರೂ ಸಹ ಕಾಯ ಸರ್ಕಾರಗಳೂ ಕೂಡ ವರದಿಯನ್ನು ಅಂಗೀಕರಿಸಿ, ಕೇಂದ್ರಕ್ಕೆ ಕಳುಹಿಸಿರುವುದಿಲ್ಲ ಎಂದು ಆರೋಪಿಸಿದರು.


ಸರ್ಕಾರ ಪರಿಶಿಷ್ಟ ಜಾತಿ, ಪಂಗಡಗಳ ಭೂ ಪರಭಾರೆ ನಿಷೇದ ಕಾಯ್ದೆಗೆ ಆನ್ವಯವಾಗುವಂತೆ ತಿದ್ದುಪಡಿ ಮಾಡಬೇಕು. ಪರಿಶಿಷ್ಟ ಜಾತಿ, ವರ್ಗಗಳ ಅಭಿವೃದ್ಧಿಗಾಗಿ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿಯಲ್ಲಿ ಮೀಸಲಿಟ್ಟ ಹಣವನ್ನು ವಾಪಸ್ ಪಡೆಯಲು ಸರ್ಕಾರ ರಚಿಸಿರುವ ೭(ಡಿ)ಕಾಯ್ದೆ ರದ್ದುಪಡಿಸಬೇಕು. ಪರಿಶಿಷ್ಟ ಜಾತಿಗಳ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸೌಲಭ್ಯ ಪಡೆಯುತ್ತಿರುವವರನ್ನು ಶಿಕ್ಷೆಗೆ ಗುರಿಪಡಿಸಬೇಕು. ಸುಳ್ಳು ಪ್ರಮಾಣ ಪತ್ರ ನೀಡುವ ಅಧಿಕಾರಿಗಳ ವಿರುದ್ಧ ದೌರ್ಜನ್ಯ ತಡೆ ಕೇಸು ದಾಖಲಿಸಿ, ಶಿಕ್ಷೆಗೆ ಗುರಿಪಡಿಸಬೇಕು. ರಾಜ್ಯ ಸರ್ಕಾರಿ ನೌಕರರ ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು, ಬಗರ್ ಹುಕುಂಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಬೇಕು ಎಂದು ಆಗ್ರಹಿಸಿದರು.


ಸರ್ಕಾರಿ ಭೂಮಿಯಲ್ಲಿ ಮನೆಗಳನ್ನು ಕಟ್ಟಿಕೊಂಡಿರುವ ಬಡವರಿಗೆ ಹಕ್ಕುಪತ್ರ ನೀಡಬೇಕು. ನಿವೇಶನ ರಹಿತ ಬಡವರಿಗೆ ವಾಸಕ್ಕೆ ಯೋಗ್ಯವಾದ ಭೂಮಿ ಖರೀದಿಸಿ ನಿವೇಶನ ಹಕ್ಕುಪತ್ರ ನೀಡಬೇಕು. ವಸತಿ ಯೋಜನೆಯಡಿ ನೀಡುವ ಸಹಾಯಧನ ರೂ.೫ ಲಕ್ಷ ನೀಡಬೇಕು. ಪರಿಶಿಷ್ಟ ಜಾತಿ ಬೇಡ, ಜಂಗಮ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ವಸತಿ ಶಾಲೆ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಬೇಡಿಕೆಯ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಡೇಗೌಡರವರ ಮುಖಾಂತರ ಸರ್ಕಾರಕ್ಕೆ ಹಸ್ತಾಂತರಿಸಲಾಯಿತು.


ಪ್ರತಿಭಟನೆಯಲ್ಲಿ ರಘು ಜಿಲ್ಲಾ ಸಂಘಟನಾ ಸಂಚಾಲಕ ಎಂ.ಮನೋಜ್, ರಘು ಜಿಲ್ಲಾ ದಲಿತ ಮಹಿಳಾ ಒಕ್ಕೂಟದ ಸಂಚಾಲಕಿ ಪವಿತ್ರ ಶಿವಕುಮಾರ್, ಸಂಘಟನಾ ಸಂಚಾಲಕಿ ಪದ್ಮಾವತಿ, ಖಜಾಂಚಿ ಭಾಗ್ಯವತಿ, ವಿರಾಜಪೇಟೆ ತಾಲೂಕು ಸಂಚಾಲಕಿ ರೇಖಾ ಹಾಗೂ ಪ್ರಮುಖರಾದ ಮಂಜುಳಾ, ಬೋಜ, ಕುಳಿಯ, ರವಿ, ಶಿವಕುಮಾರ್, ಅನಂತಕುಮಾರ್ ಮತ್ತಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net