ಶಾಸಕ ಸ್ಥಾನದಿಂದ ಮುನಿರತ್ನ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

mysore
Published on

ಮೈಸೂರು: ಮುನಿರತ್ನಂ ನಾಯ್ಡು ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ಭೀಮ ಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.


ಬಿಬಿಎಂಪಿ ಗುತ್ತಿಗೆದಾರರೊಂದಿಗೆ ಮುನಿರತ್ನ ಅವರು ಅಸಭ್ಯವಾಗಿ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು, ಇದರಲ್ಲಿ ಮಹಿಳೆಯರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಜಾತಿ ನಿಂದನೆ ಸಹ ಮಾಡಿದ್ದಾರೆ. ಆದ್ದರಿಂದ ಇವರ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯ್ದೆ ಪ್ರಕರಣ ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.


ಸಂವಿಧಾನದ ಆಶಯದಂತೆ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕಾದ ಶಾಸಕರೊಬ್ಬರು ಸಮಾಜದಲ್ಲಿ ಶಾಂತಿ ಕದಡುವ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧ. ಈ ವಿಚಾರ ಸೂಕ್ಷ್ಮ, ಗಂಭೀರವಾಗಿದೆ. ಆದ್ದರಿಂದ ಇವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ರಾಜ್ಯದಿಂದಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.


ಸಂಘಟನೆಯ ಜಿಲ್ಲಾಧ್ಯಕ್ಷ ಎಸ್.ಸರ್ವೇಶ್, ಮುಖಂಡರಾದ ಎಚ್.ಧರ್ಮರಾಜು, ಕೆ.ಸಿ.ಸಿದ್ದರಾಜು, ಜಂತಗಳ್ಳಿ ದೇವರಾಜು ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net