2ನೇ ಆರೋಪಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

Strike
Published on

ಯಲ್ಲಾಪುರ: ತಾಲೂಕಿನ ಹುಣಶೆಟ್ಟಿಕೊಪ್ಪ ಗ್ರಾಮದೇವಿ ಜಾತ್ರೆಗೆ ಹಳಿಯಾಳದಿಂದ ಆಗಮಿಸಿದ್ದ ಸಿದ್ದಿ ಸಮುದಾಯದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿ ಅನಿಕೇತ ಮಿರಾಶಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸಿದ್ದಿ ಸಮುದಾಯದವರು ಸೋಮವಾರ ಪಟ್ಟಣದಲ್ಲಿ ಬೃಹತ್ ಪತಿಭಟನೆ ನಡೆಸಿದರು.

ಪಟ್ಟಣದ ಪೊಲೀಸ್ ಠಾಣೆ ಎದುರಿನಿಂದ ಸುಮಾರು ಮುನ್ನೂರಕ್ಕೂ ಹೆಚ್ಚು ಸಿದ್ದಿ ಸಮುದಾಯದವರು ರಾಜ್ಯ ಸಿದ್ದಿ ಬುಡಕಟ್ಟು ಅಭಿವೃದ್ಧಿ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿಯವರೆಗೆ ಮೆರವಣಿಗೆ ನಡೆಸಿ, ಅಲ್ಲಿ ಧರಣಿ ನಡೆಸಿದರು. ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಸಿದ್ದಿ ಸಮುದಾಯದವರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕು. ಸಿದ್ದಿ ಯುವಕನ ಬೈಕ್ ಅಡ್ಡಗಟ್ಟಿ ಮನ ಬಂದಂತೆ ಥಳಿಸಿ ಕೊಲೆ ಮಾಡಲಾಗಿದೆ. ಇದರಿಂದ ಸಿದ್ದಿ ಸಮುದಾಯ ಭಯ, ಆತಂಕದಲ್ಲಿದೆ. ಸಮಾಜದ ಜನರಿಗೆ ರಕ್ಷಣೆ ನೀಡಬೇಕು. ಕೊಲೆಯ ಕೃತ್ಯದಲ್ಲಿ ಭಾಗಿಯಾದ ಎರಡನೇ ಆರೋಪಿಯನ್ನು ಬಂಧಿಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ತಹಸೀಲ್ದಾರ್ ಎಂ. ಗುರುರಾಜ, ಸಹಾಯಕ ಚುನಾವಣಾ ಅಧಿಕಾರಿ ಅಜ್ಜಪ್ಪ ಸೊಗಲದ ಮನವಿ ಸ್ವೀಕರಿಸಿದರು.

ನಂತರ ಮಾತನಾಡಿದ ಅವರು, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ 7 ಆರೋಪಿಗಳನ್ನು ಬಂಧಿಸಲಾಗಿದೆ. ಎರಡನೇ ಆರೋಪಿಯನ್ನೂ ಶೀಘ್ರವೇ ಬಂಧಿಸಲಾಗುವುದು. ಆತನ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ ಎಂದರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಎರಡನೇಯ ಆರೋಪಿಯನ್ನು ಬಂಧಿಸಲು ಪಟ್ಟು ಹಿಡಿದರು.

ಇದೇ ವೇಳೆ ಮೃತ ಸಿದ್ದಿ ಯುವಕನ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು. ಬಂದೋಬಸ್ತ್‌ಗಾಗಿ ಪೊಲೀಸ್ ಮೀಸಲು ಪಡೆಯನ್ನು ನಿಯೋಜಿಸಲಾಗಿತ್ತು. ಸಿದ್ದಿ ಅಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷ ಬೆನಿತ್ ಸಿದ್ದಿ, ಪ್ರಮುಖರಾದ ಲಾರೆನ್ಸ್ ಸಿದ್ದಿ, ಜಾನ್ ಕೊಸ್ತಾ ಸಿದ್ದಿ ಸೇರಿದಂತೆ ಸಮಾಜದ ಮುಖಂಡರು, ಮಹಿಳೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net