

ಮಡಿಕೇರಿ: ಸಂಪಾಜೆ ಗ್ರಾಮ ಪಂಚಾಯಿತಿಯಲ್ಲಿ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ತೆರಳಿದ ಸಂದರ್ಭ ಅರ್ಜಿ ಸ್ವೀಕರಿಸಲು ನಿರಾಕರಿಸಿದ ಬಿಲ್ ಕಲೆಕ್ಟರ್ ಹರೀಶ್‌ರನ್ನು ಅಮಾನತು ಮಾಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮಂಗಳವಾರ ಸಂಪಾಜೆ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲೆ, ಮಡಿಕೇರಿ ತಾಲೂಕು ಘಟಕ, ಸಂಪಾಜೆ ಹೋಬಳಿ ಹಾಗೂ ಗ್ರಾಮ ಸಮಿತಿಗಳ ಆಶ್ರಯದಲ್ಲಿ ಸಂಪಾಜೆ ಗೇಟ್‌ನಿಂದ ಗ್ರಾಮ ಪಂಚಾಯಿತಿ ಆವರಣದವರೆಗೆ ಮೆರವಣಿಗೆ ಮೂಲಕ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಜಿಲ್ಲಾ ಅಧ್ಯಕ್ಷ ಎಚ್.ಎಲ್.ದಿವಾಕರ್ ಮಾತನಾಡಿ, ದಲಿತರನ್ನು ಕಡೆಗಣಿಸುವ ಪ್ರಕರಣಗಳು ಕೊಡಗು ಜಿಲ್ಲೆಯ ಎಲ್ಲಾ ಪಂಚಾಯಿತಿಗಳಲ್ಲಿ ಕಂಡು ಬರುತ್ತಿದೆ. ಇದು ಮುಂದುವರಿದರೆ ಎಲ್ಲೆಡೆ ಪ್ರತಿಭಟಿಸಬೇಕಾಗುತ್ತದೆ. ಸಂಪಾಜೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಹರೀಶ್‌ರನ್ನು ಅಮಾನತು ಮಾಡದಿದ್ದಲ್ಲಿ ಆ.೧೪ ರ ಮಧ್ಯರಾತ್ರಿ ಮಡಿಕೇರಿ ಗಾಂಧಿ ಮೈದಾನದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಮಡಿಕೇರಿ ತಾಲೂಕು ಅಧ್ಯಕ್ಷ ದೀಪಕ್ ಪೊನ್ನಪ್ಪ, ಸಂಪಾಜೆ ಹೋಬಳಿ ಅಧ್ಯಕ್ಷ ಎಚ್.ಬಿ.ಶಶಿಕುಮಾರ್, ಉಪಾಧ್ಯಕ್ಷರಾದ ಎಚ್.ಬಿ.ಸುಂದರ ಹಾಗೂ ಸದಸ್ಯರು ಭಾಗವಹಿಸಿದ್ದರು.