ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ ಪ್ರತಿಭಟನೆ

20 bannur 1
ಬನ್ನೂರಿನ ಪುರಸಭೆ ವ್ಯಾಪ್ತಿಯ 1ನೇ ವಾರ್ಡ್‌ಗೆ ಕುಡಿಯುವ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ನಾಗರಿಕರು ಪುರಸಭೆ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟಿಸಿದರು. ಹುಚ್ಚೇಗೌಡ, ರತ್ನಮ್ಮ, ಪುಟ್ಟತಾಯಮ್ಮ, ನಾಗಮ್ಮ, ಶಂಕರೇಗೌಡ, ಮಾಯೀಗೌಡ, ಶಕುಂತಲಾ ಗೌಡ ಸೇರಿದಂತೆ ಹಲವರು ಇದ್ದರು.
Published on

ಬನ್ನೂರು: ಹಲವಾರು ತಿಂಗಳಿಂದ ಕುಡಿಯುವ ನೀರಿಲ್ಲದೆ ಒಂದನೇ ವಾರ್ಡ್‌ನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಕುಡಿಯುವ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ಇಲ್ಲಿನ ಪುರಸಭೆ ಮುಂದೆ ಮಂಗಳವಾರ ನಾಗರಿಕರು ಪ್ರತಿಭಟನೆ ನಡೆಸಿದರು.

ಹಲವಾರು ಬಾರಿ ಕಚೇರಿಗೆ ತೆರಳಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೇಳಿದಾಗಲೆಲ್ಲ ಏನಾದರೂ ಒಂದು ಕಾರಣ ನೀಡುತ್ತಾರೆಯೇ ಹೊರತು ನೀರು ಮಾತ್ರ ನೀಡಿಲ್ಲ ಎಂದು ಒಂದನೇ ವಾರ್ಡ್ ನಿವಾಸಿಗಳಾದ ರತ್ನಮ್ಮ, ಪುಟ್ಟತಾಯಮ್ಮ ಆರೋಪಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಹೋಬಳಿ ಅಧ್ಯಕ್ಷ ಹುಚ್ಚೇಗೌಡ ಮಾತನಾಡಿ, ಜನರಿಗೆ ಮೂಲಸೌಕರ್ಯವನ್ನು ಪುರಸಭೆ ನೀಡದೆ ತೊಂದರೆ ನೀಡುತ್ತಿದ್ದು, ಸಾರ್ವಜನಿಕರ ಸಮಸ್ಯೆ ಕೂಡಲೇ ಪರಿಹಾರವಾಗದಿದ್ದಲ್ಲಿ ಬುಧವಾರ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಆಗಮಿಸಿದ ಮುಖ್ಯಾಧಿಕಾರಿ ಹೇಮಂತ್‌ಕುಮಾರ್ ಮಾತನಾಡಿ, ಪುರಸಭೆಯಿಂದ ನೀರು ಪೂರೈಕೆ ಮಾಡಿದ ಸಂದರ್ಭದಲ್ಲಿ ಕೆಲವರು ಮೋಟಾರ್ ಅಳವಡಿಸಿ ನೀರನ್ನು ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲದೆ ಸಮರ್ಪಕವಾಗಿ ನೀರಿಗೆ ಟ್ಯಾಬ್ ಹಾಕದೆ ನೀರನ್ನು ಪೋಲು ಮಾಡಲಾಗುತ್ತಿದೆ. ಅದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಮುಂದಿನ ಭಾಗದ ಜನರಿಗೆ ನೀರನ್ನು ನೀಡುವಂತಹ ಕಾರ್ಯ ಮಾಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ನಾಗಮ್ಮ, ಶಂಕರೇಗೌಡ, ಮಾಯೀಗೌಡ, ಶಕುಂತಲಾ ಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net