ಶುದ್ಧ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

Protest demanding supply of clean drinking water
ಶುದ್ಧ ಕುಡಿಯುವ ನೀರು ಪೂರೈಸಲು ಆಗ್ರಹಿಸಿ ಲೋಕಾಪುರದ 1ನೇ ವಾರ್ಡ್ ನಿವಾಸಿಗಳು ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Published on

ಲೋಕಾಪುರ: ಶುದ್ಧ ಕುಡಿಯುವ ನೀರು ಸೇರಿ ಮೂಲ ಸೌಲಭ್ಯ ಒದಗಿಸಬೇಕೆಂದು ಪಟ್ಟಣದ ವಾರ್ಡ್ ನಂ. 1ರ ನಿವಾಸಿಗಳು ಲೋಕಾಪುರ ಪಟ್ಟಣ ಪಂಚಾಯಿತ್ ಕಚೇರಿಗೆ ಬೀಗ ಜಡಿದು ಗುರುವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.

ಪಟ್ಟಣದ ವಾರ್ಡ್ ನಂ. 1ರಲ್ಲಿ ಬಹು ದಿನಗಳಿಂದ ಪಪಂನಿಂದ ಕಲುಷಿತ ನೀರು ಪೂರೈಸಲಾಗುತ್ತಿದ್ದು, ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಕಲುಷಿತ ನೀರು ಬಳಕೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಶೀಘ್ರ ಪಪಂ ಅಧಿಕಾರಿಗಳು ಶುದ್ಧ ಕುಡಿಯುವ ನೀರು ಪೂರೈಸಬೇಕೆಂದು ಆಗ್ರಹಿಸಿದರು.

ಅಲ್ಲದೆ, ನಿವಾಸಿಗಳು ತಮ್ಮ ಮನೆಗಳಿಗೆ ಪೂರೈಕೆಯಾಗುತ್ತಿರುವ ಕಲುಷಿತ ಕೆಂಪು ಬಣ್ಣದ ನೀರನ್ನು ಬಕೆಟ್ ಮತ್ತು ಬಾಟಲಿಯಲ್ಲಿ ತಂದು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

2 ಗಂಟೆ ಕಾದರೂ ಅಧಿಕಾರಿಗಳ ಸುಳಿವಿಲ್ಲ

ಪ್ರತಿಭಟನೆ ವೇಳೆ ಎರಡು ಗಂಟೆ ಕಾಯ್ದರೂ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದಿರುವುದು ಪ್ರತಿಭಟನಾಕಾರರಿಂದ ಮತ್ತಷ್ಟು ಆಕ್ರೋಶ ವ್ಯಕ್ತವಾಯಿತು. ಅಧಿಕಾರಿಗಳ ನಿರ್ಲಕ್ಷೃದಿಂದ ಜನರು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ ಎಂದು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಪಪಂ ಇಂಜಿನಿಯರ್ ಪ್ರಶಾಂತ ಪಾಟೀಲ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರಲ್ಲದೆ, ಮೇಲಧಿಕಾರಿಗಳು ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಮುಖ್ಯಾಧಿಕಾರಿ ಭರವಸೆ

ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ಶುದ್ಧ ಕುಡಿಯುವ ನೀರಿಗಾಗಿ ಎರಡು ಬೋರ್‌ವೆಲ್ ಕೊರೆಯಿಸಲಾಗಿದ್ದು, ಅವುಗಳಿಂದ ಎರಡು ದಿನಗಳಲ್ಲಿ ನೀರು ಪೂರೈಸುವ ಭರವಸೆ ನೀಡಿದಾಗ, ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ಹಿಂಪಡೆದರು.

ರಮೇಶ ಗಸ್ತಿ, ನಿಂಗಪ್ಪ ಕುಡುಚಿ, ಭೀಮಸಿ ಗಸ್ತಿ, ಮಂಜು ಗಸ್ತಿ, ದುರ್ಗಪ್ಪ ಗಸ್ತಿ, ರಮೇಶ ನಾವಲಗಿ, ನಾಗಪ್ಪ ಗಸ್ತಿ, ಶಶಿಕಿರಣ ನ್ಯಾಮಗೌಡರ, ಕುಮಾರ ಈರನ್ನವರ, ಸುರೇಶ ಗಸ್ತಿ, ರೇಣುಕಾ ನ್ಯಾಮಗೌಡ, ಲಕ್ಷ್ಮಣ ಗಸ್ತಿ, ಲೋಕಣ್ಣ ಉಳ್ಳಾಗಡ್ಡಿ, ಲೋಕಣ್ಣ ಬಟುಕುರ್ಕಿ, ಕೃಷ್ಣಪ್ಪ ಕತ್ತಿ ಮತ್ತಿತರರಿದ್ದರು. ಪಿಎಸ್‌ಐ ಕೆ.ಬಿ. ಜಕ್ಕಣ್ಣವರ ಸೂಕ್ತ ಬಂದೋ ಬಸ್ತ್ ಏರ್ಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net