

ಮಂಡ್ಯ: ಅರ್ಹರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ನಗರದಲ್ಲಿ ಮಂಗಳವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು, ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. ಮಂಡ್ಯ ನಗರ ವ್ಯಾಪ್ತಿಯಲ್ಲಿ ಸುಮಾರು 5 ಸಾವಿರ ಕುಟುಂಬಕ್ಕೆ ಸ್ವಂತ ಮನೆ ಇಲ್ಲ ಎಂದು ಅಂದಾಜು ಮಾಡಲಾಗಿದೆ. ಈ ನಿಟ್ಟಿನಲ್ಲಿ ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿಯು ಫೆಬ್ರವರಿ ತಿಂಗಳಲ್ಲಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಪರಿಶೀಲಿಸಿ ಆದ್ಯತೆ ಮೇರೆಗೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದೆ ಎಂದು ಪತ್ರವನ್ನು ಕೂಡ ಕಳಿಸಿದ್ದಾರೆ ಎಂದು ತಿಳಿಸಿದರು.
ರಾಜಕಾರಣಿಗಳ ಹಿಂಬಾಲಕರು, ಬೆಂಬಲಿಗರಿಗೆ ಹಾಗೂ ಪಟ್ಟಭದ್ರತಾ ಶಕ್ತಿಗಳ ಹಿತ ಕಾಯಲು ಮನೆಗಳನ್ನು ನೀಡಲಾಗಿದೆ. ಅರ್ಹ ಬಡವರನ್ನು ಪರಿಗಣಿಸಲಿಲ್ಲ. ಈ ಹಿನ್ನೆಲೆಯಲ್ಲಿ ಸ್ವಂತ ಮನೆ ಇಲ್ಲದವರ ಪಟ್ಟಿಯನ್ನು ಕೂಡಲೇ ಬಿಡುಗಡೆ ಮಾಡಿ ಎಂದು ಚಳವಳಿ ಆರಂಭಿಸಲಾಗಿದೆ. ಯಾವ ದತ್ತಾಂಶದ ಆಧಾರದಲ್ಲಿ ಪಟ್ಟಿ ತಯಾರಿಸಿದ್ದಾರೆಂದು ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಅಭಿಮಾನಿ ಸಮಸಮಜ ಸಂಘಟನೆಯ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ, ನಾವು ದ್ರಾವಿಡ ಕನ್ನಡಿಗರು ಚಳವಳಿಯ ಮುಖ್ಯಸ್ಥ ಅಭಿ ಒಕ್ಕಲಿಗ, ಪ್ರಗತಿಪರ ಹೋರಾಟಗಾರರಾದ ಎಂ.ವಿ.ಕೃಷ್ಣ, ಕರವೇ ಜಯರಾಂ ಇತರರಿದ್ದರು.