

ಮಡಿಕೇರಿ:
ಮಹಿಳೆಯ ಸುರಕ್ಷತೆಗೆ ಪರಿಣಾಮಕಾರಿ ಕ್ರಮಗಳ ಜಾರಿಗೆ ಒತ್ತಾಯಿಸಿ ಇಲ್ಲಿ ಮಹಿಳೋದಯ ಮಹಿಳಾ ಒಕ್ಕೂಟದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಒಕ್ಕೂಟದ 30ಕ್ಕೂ ಅಧಿಕ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ‘ಅತ್ಯಾಚಾರಿಗಳು ಈ ದೇಶದಲ್ಲಿ ಜೀವಿಸಲು ಅನರ್ಹರು’, ‘ಹಿಂಸೆ ರಹಿತ ಜೀವನ ಪ್ರತಿಯೊಬ್ಬರ ಹಕ್ಕು’, ‘ಹೆಣ್ಣನ್ನು ಹಿಂಸಿಸಬೇಡಿ ಅವಳಿಗೂ ಬದುಕುವ ಹಕ್ಕಿದೆ’, ‘ನೆಮ್ಮದಿಯಿಂದ ಬಾಳಿ, ನೆಮ್ಮದಿಯಿಂದ ಬಾಳಲು ಬಿಡಿ’ ಸೇರಿದಂತೆ ವಿವಿಧ ಘೋಷವಾಕ್ಯಗಳಿರುವ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನಾನಿರತರು ಘೋಷಣೆಗಳನ್ನು ಕೂಗಿದರು.
ಮಹಿಳೆಯರ ವಿರುದ್ಧ ದಿನೇ ದಿನೇ ಹೆಚ್ಚುತ್ತಿರುವ ಅಪರಾಧ ಕೃತ್ಯಗಳಿಗೆ ಸಂಬAಧಿಸಿದAತೆ ಆತಂಕ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸರ್ಕಾರ ಇನ್ನು ತಡಮಾಡದೇ ಮಹಿಳೆಯ ರಕ್ಷಣೆಯನ್ನು ಆದ್ಯತೆಯ ವಿಷಯವನ್ನಾಗಿ ಪರಿಗಣಿಸಿ, ಕೂಡಲೇ ಸೂಕ್ತ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಮಹಿಳೆಯರ ಸುರಕ್ಷತೆಗೆ ಕೈಗೊಳ್ಳುವ ಕ್ರಮಗಳು ಕೇವಲ ಒಂದು ಮಟ್ಟಕ್ಕೆ ಮಾತ್ರ ಸೀಮಿತವಾಗಿರದೇ ಅದು ಗ್ರಾಮ ಮಟ್ಟದಿಂದ ಕೇಂದ್ರ ಮಟ್ಟದವರೆಗೂ ಇರಬೇಕು. ಅಂತಹ ಪರಿಣಾಮಕಾರಿಯಾದ ಕ್ರಮಗಳ ಅಗತ್ಯ ಇದೆ. ಪಶ್ಚಿಮ ಬಂಗಾಲದ ಕೋಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅಮಾನವೀಯ ಕೃತ್ಯಗಳು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಬೆಂಗಳೂರು ಸೇರಿದಂತೆ ದೇಶದ ಇತರೆ ಭಾಗಗಳಲ್ಲಿಯೂ ದಿನ ಕಳೆದಂತೆ ಮಹಿಳೆಯ ವಿರುದ್ಧ ದೌರ್ಜನ್ಯಗಳು ಹೆಚ್ಚುತ್ತಿವೆ. ಹಾಗಾಗಿ, ಈ ವಿಷಯವನ್ನು ಸರ್ಕಾರ ಗಂಭೀರವಾಗಿಯೇ ಪರಿಗಣಿಸಬೇಕು.
ಕೇಂದ್ರ ಹಾಗೂ ರಾಜ್ಯದಲ್ಲಿ ಮಹಿಳೆಯರ ರಕ್ಷಣೆಗಾಗಿ ಮಹಿಳಾ ಆಯೋಗಗಳನ್ನು ರಚಿಸಿದ್ದರೂ ಮಹಿಳಾ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಹೆಚ್ಚಳವನ್ನೇ ಕಾಣಲಾಗುತ್ತಿದೆ. ಹಾಗಾಗಿ, ಸರ್ಕಾರ ಮಹಿಳೆಯ ರಕ್ಷಣೆಗೆ ತಕ್ಷಣವೇ ಏನಾದರೂ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಲಾಯಿತು.
ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ ಅವರ ಸಮ್ಮುಖದಲ್ಲಿ ಮಹಿಳೆಯರು ಹಲವು ಹಕ್ಕೊತ್ತಾಯಗಳನ್ನು ಮಂಡಿಸಿದರು.
ಓಡಿಪಿ ಸಂಸ್ಥೆಯ ಸಂಯೋಜಕಿ ಮೋಲಿ, ಕೌಶಲ್ಯಾಭಿವೃದ್ಧಿ ಸಂಯೋಜಕಿ ಲಲಿತಾ, ವಲಯ ಸಂಯೋಜಕಿ ಜಾಯ್ಸ್ ಮೆನೆಜಸ್, ಮುಖಂಡರಾದ ಎನ್.ವಿಜಯಾ, ಮಮತಾ, ಸಿ.ಎಸ್.ಅಕ್ಷರಾ, ಒಕ್ಕೂಟದ ಅಧ್ಯಕ್ಷೆ ತಾರಾ, ಮಹಾ ಒಕ್ಕೂಟದ ಸದಸ್ಯರಾದ ಲೂಸಿ ಜೇಮ್ಸ್, ರಾಣಿ, ಮೇರಿ, ಜಯಂತಿ, ತಾಲೂಕು ಒಕ್ಕೂಟದ ಸದಸ್ಯರು, ಜಿಲ್ಲಾ ಒಕ್ಕೂಟದ ಸದಸ್ಯರು ಹಾಗೂ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.