

ಕುಮಟಾ: ಕುಮಟಾ-ಶಿರಸಿ ರಾಜ್ಯ ಹೆದ್ದಾರಿಯ ಹೊಂಡಗುಂಡಿಗಳನ್ನು ಕೂಡಲೇ ದುರಸ್ತಿ ಮಾಡಬೇಕು ಹಾಗೂ 6 ತಿಂಗಳಲ್ಲಿ ರಸ್ತೆಯ ಬಾಕಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಅಳಕೋಡ ಪಂಚಾಯಿತಿ ವ್ಯಾಪ್ತಿಯ ಕತಗಾಲದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ರಸ್ತೆಯ ಹೊಂಡಗಳಲ್ಲಿ ಗಾಳ ಹಾಕಿ ಮೀನು ಹಿಡಿಯುವ ಹಾಗೂ ಬಾಳೆಗಿಡಗಳನ್ನು ನೆಟ್ಟು ವ್ಯವಸ್ಥೆಯ ವಿರುದ್ಧ ಅಣಕು ಪ್ರದರ್ಶಿಸಲಾಯಿತು. ಕೆಲ ಕಾಲ ವಾಹನ ಸಂಚಾರ ತಡೆಯಲಾಯಿತು.
ಶಿರಸಿ-ಕುಮಟಾ ರಸ್ತೆ ಅಭಿವೃದ್ಧಿ ಕಾಮಗಾರಿ ಗುತ್ತಿಗೆ ಪಡೆದಿರುವ ಆರ್.ಎನ್. ಶೆಟ್ಟಿ ಕಂಪನಿ 6 ವರ್ಷ ಕಳೆದರೂ ಪೂರ್ತಿಗೊಳಿಸಿಲ್ಲ. ಅಲ್ಲಲ್ಲಿ ಅರೆಬರೆ ಕಾಮಗಾರಿ ಮಾಡಲಾಗಿದೆ. ಮಳೆಯಿಂದಾಗಿ ಗುಂಡಿಗಳು ಬಿದ್ದಿದ್ದು ವಾಹನ ಸಂಚಾರಕ್ಕೆ ತೀರಾ ಸಮಸ್ಯೆಯಾಗಿದೆ. ಕೂಡಲೇ ದುರಸ್ತಿಪಡಿಸಬೇಕು ಎಂದು ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಸಂದರ್ಭದಲ್ಲೇ ಇದೇ ಮಾರ್ಗವಾಗಿ ಹೊರಟಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ವಾಹನವನ್ನು ತಡೆದು ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದರು. ಶೀಘ್ರವೇ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿ ತೆರಳಿದರು.
ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ, ವಕೀಲ ನಾಗರಾಜ ಹೆಗಡೆ ಮಾತನಾಡಿದರು. ಸ್ಥಳೀಯರಾದ ಅನಂತ ಶಾನಭಾಗ, ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಾನಂದ ವೇರ್ಣೆಕರ, ಗ್ರಾ.ಪಂ ಸದಸ್ಯರಾದ ನಳಿನಿ ನಾಯ್ಕ, ಕರವೇ ಕತಗಾಲ ಘಟಕಾಧ್ಯಕ್ಷ ಮಾರುತಿ ಆನೆಗುಂದಿ, ಮಹೇಂದ್ರ ನಾಯ್ಕ, ಹರೀಶ ಭಟ್, ಪ್ರದೀಪ ಶೆಟ್ಟಿ, ಅಣ್ಣಪ್ಪ ಮುಕ್ರಿ, ಅಂತೋನಿ ಲೋಪಿಸ್, ಹರೀಶಚಂದ್ರ ಮುಕ್ರಿ, ಮಾಸ್ತಿಗೌಡ, ನಾಗರಾಜ ನಾಯ್ಕ, ಈಶ್ವರ ಗೌಡ ಇತರರು ಇದ್ದರು.