

ಕಲಘಟಗಿ: ತಾಲೂಕಿನ ಮಿಶ್ರಿಕೋಟಿ ಗ್ರಾಮದ ಪ್ಯಾಟಿ ಬಸವೇಶ್ವರ ದೇವಸ್ಥಾನದಿಂದ ಹುಬ್ಬಳ್ಳಿ ಮಾರ್ಗದ ಮುಖ್ಯ ರಸ್ತೆಯನ್ನು ಕಾಂಕ್ರಿಟ್ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಬೇಕು ಎಂದು ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಬುಧವಾರ ಗ್ರಾಮದ ರಸ್ತೆ ಸಂಚಾರ ತಡೆದು ಅಧಿಕಾರಿಗಳ ಹಾಗೂ ಜನ ಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆಯಲ್ಲಿ ತಗ್ಗು-ಗುಂಡಿ ಬಿದ್ದು ಸಂಪೂರ್ಣ ಹಾಳಾಗಿದೆ. ನಿತ್ಯ ಹುಬ್ಬಳ್ಳಿಯಿಂದ ವಿವಿಧ ಗ್ರಾಮಗಳ ನೂರಾರು ವಾಹನ ಸವಾರರು ಮಿಶ್ರಿಕೋಟಿ ಗ್ರಾಮದ ಮೂಲಕ ಸಂಚರಿಸುತ್ತಾರೆ. ಗ್ರಾಮದ ಒಳ ರಸ್ತೆಯಾಗಿದ್ದರಿಂದ ರಸ್ತೆಯ ಅಕ್ಕ ಪಕ್ಕದ ಮನೆಗಳಿಗೆ ಧೂಳು ಆವರಿಸಿ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಗ್ರಾಮಸ್ಥ ಮುತ್ತುಗೌಡ ಪಾಟೀಲ ಮಾತನಾಡಿ, ಮಳೆಗಾಲದಲ್ಲಿ ರಸ್ತೆಯ ನೀರು ಮನೆಗಳಿಗೆ ನುಗ್ಗುತ್ತದೆ. ಪಾದಚಾರಿಗಳಿಗೆ ಹಾಗೂ ಶಾಲೆ ಮಕ್ಕಳಿಗೆ ತೆರಳಲು ತೊಂದರೆ ಅನುಭವಿಸುತ್ತಾರೆ. ರಸ್ತೆ ನಿರ್ಮಿಸಲು ಅನುದಾನ ಮಂಜೂರು ಆಗಿದೆ ಎಂದು ಅಧಿಕಾರಿಗಳು ಭರವಸೆ ನೀಡುತ್ತಾರೆ. ಆದರೆ, ರಸ್ತೆ ಅಭಿವೃದ್ಧಿಪಡಿಸಲು ಯಾರು ಮುಂದೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎರಡು ವರ್ಷದಿಂದ ಕ್ಷೇತ್ರದ ಶಾಸಕರು ಹಾಗೂ ಸಚಿವರು ಗ್ರಾಮಗಳ ಅಭಿವೃದ್ಧಿಗೆ ಗಮನ ಹರಿಸುತ್ತಿಲ್ಲ. ಹದಗೆಟ್ಟ ರಸ್ತೆಯಿಂದ ಅಪಘಾತಗಳು ಸಂಭವಿಸುತ್ತಿವೆ. ಇನ್ನಾದರೂ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ಗ್ರಾಮಸ್ಥ ಶಿವಾನಂದ ಹುರಕಡ್ಲಿ ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಾಲೂಕು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಿದ್ದಲಿಂಗಸ್ವಾಮಿ ಚಿಕ್ಕಮಠ ಭೇಟಿ ನೀಡಿ ಮನವಿ ಸ್ವೀಕರಿಸಿ, ರಸ್ತೆಗೆ 2 ಕೋಟಿ ರೂ. ಅನುದಾನಕ್ಕೆ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ನಾಗರಾಜ ಲಂಗೋಟಿ, ಬಸವಣ್ಣಪ್ಪ ಹೆಬ್ಬಳ್ಳಿ, ಸುರೇಶ ಬೋವಿ, ಮಹೇಶ ತಿಪ್ಪಣ್ಣವರ, ಐ.ಸಿ. ಗೋಕುಲ, ವಿಠ್ಠಲ ಸೂರ್ಯವಂಶಿ, ಹನುಮಂತಗೌಡ ಪಾಟೀಲ, ಮಲ್ಲೇಶ ಅರಳಿಕಟ್ಟಿ, ಮಂಜುನಾಥ ವಾವಳ, ಸಂಗೀತಾ ಉಗರಗೋಳ, ಮಾದೇವಿ ಮುದ್ದೇನವರ, ರೇಣುಕಾ ಹಾರೋಗೇರಿ, ಮಲ್ಲವ್ವ ಬಸಟ್ಟೆಪ್ಪನವರ, ಹೇಮಾ ತುಪ್ಪಕನವರ, ಮಹಾದೇವಿ ದಾಸಪ್ಪನವರ, ಶಾರವ್ವ ದಾನಪ್ಪನವರ, ಕವಿತಾ ಬೆಂಗೇರಿ, ಕಲಾವತಿ ವಾವಳ, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.