

ಹನೂರು: ರಾಮಾಪುರದಿಂದ ನಾಲ್‌ರೋಡ್‌ವರೆಗಿನ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಶುಕ್ರವಾರ ತಾಲೂಕಿನ ರಾಮಾಪುರ ಗ್ರಾಮದಲ್ಲಿ ಆಟೋ, ಲಾರಿ ಚಾಲಕರು, ಮಾಲೀಕರು, ವಿವಿಧ ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು ಹಾಗೂ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದರು.
ಹೋಬಳಿ ಕೇಂದ್ರ ಸ್ಥಾನವಾದ ರಾಮಾಪುರದ ಶ್ರಿ ಶಿವಕುಮಾರಸ್ವಾಮಿ ಸ್ವಾಮೀಜಿ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಕಾರರು ರಸ್ತೆ ಅವ್ಯವಸ್ಥೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಾಲ ರಸ್ತೆಯಲ್ಲಿ ಕುಳಿತು ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಸಬ್ ಇನ್ಸ್‌ಪೆಕ್ಟರ್ ಈಶ್ವರ್ ಅವರು ರಸ್ತೆ ಸಂಚಾರ ತಡೆ ಕೈ ಬಿಡುವಂತೆ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು. ಈ ವೇಳೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು.
ಬಳಿಕ ಪ್ರತಿಭಟನಾಕಾರರು ಗ್ರಾಮದಿಂದ ಮಂಚಾಪುರದವರೆಗೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಉಪ ತಹಸೀಲ್ದಾರ್ ಸುರೇಖಾ ಹಾಗೂ ಪಿಡಬ್ಲುೃಡಿ ಎಇಇ ಚಿನ್ನಣ್ಣ ಆಗಮಿಸಿದರು. ಈ ವೇಳೆ ರಸ್ತೆಯ ಗುಂಡಿಯಲ್ಲಿ ತೆಂಗಿನ ಸಸಿ ನೆಟ್ಟು ಆಕ್ರೋಶ ವ್ಯಕ್ತಪಡಿಸಿ ಗ್ರಾಮದ ವೃತ್ತಕ್ಕೆ ಹಿಂತಿರುಗಿದರು.
ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ರಾಮಾಪುರದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಗರಿಕೆಕಂಡಿ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಜತೆಗೆ ಈ ಭಾಗದ ವಿವಿಧ ಗ್ರಾಮದ ಜನರು ಸಂಚರಿಸುವ ಮುಖ್ಯ ರಸ್ತೆಯಾಗಿದೆ. ಆದರೆ ಕಳೆದ 15 ವರ್ಷಗಳಿಂದಲೂ ಈ ರಸ್ತೆಯ ಬಹುತೇಕ ಕಡೆಗಳಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ತೀರಾ ಹದಗೆಟ್ಟಿದೆ. ಇದರಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಈ ಹದಗೆಟ್ಟ ರಸ್ತೆಯಿಂದ ಬೈಕ್ ಸವಾರರು ಗುಂಡಿಗಳನ್ನು ತಪ್ಪಿಸಲು ಹೋಗಿ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆಯುತ್ತಲೇ ಇದೆ. ಜತೆಗೆ ಅಪಘಾತದಿಂದ ಸಾವು, ನೋವುಗಳು ಸಂಭವಿಸಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿದ್ದು, ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ವರ್ಷದಿಂದಲೂ ಮನವಿ ಮಾಡಿದ್ದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಮೂಲಸೌಕರ್ಯಕ್ಕೆ ಆಗ್ರಹ: ರಾಮಾಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸಮರ್ಪಕ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ಸೌಕರ್ಯವಿಲ್ಲ. ಇದರಿಂದ ಮೂಲಸೌಕರ್ಯದಿಂದ ಜನರು ವಂಚಿತರಾಗಿದ್ದಾರೆ. ಇನ್ನು ಬೀದಿ ದೀಪ ನಿರ್ವಹಣೆ ಸರಿಯಾಗಿಲ್ಲ. ಇತ್ತ ರಾಮಾಪುರ ಸರ್ಕಾರಿ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ ಇಲ್ಲಿ ಅಗತ್ಯ ವೈದ್ಯ, ಸಿಬ್ಬಂದಿ ಕೊರತೆ ಇದೆ. ಇದರಿಂದ ಅಗತ್ಯ ಚಿಕಿತ್ಸೆ ದೊರಕುತ್ತಿಲ್ಲ ಈ ಬಗ್ಗೆ ಸಂಬಂಧಿಸಿದವರು ಗಮನಹರಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಇದೇ ವೇಳೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಬಳಿಕ ಎಇಇ ಚಿನ್ನಣ್ಣ ಮಾತನಾಡಿ, ಈ ಮಾರ್ಗದಲ್ಲಿ ಅಜ್ಜೀಪುರದಿಂದ ರಾಮಾಪುರದವರೆಗೆ 10 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಈಗಾಗಲೇ ಭೂಮಿಪೂಜೆ ನೆರವೇರಿಸಲಾಗಿದ್ದು, ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನು ರಾಮಾಪುರ- ನಾಲ್‌ರೋಡ್ ಮಾರ್ಗದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಈಗಾಗಲೇ ಸರ್ಕಾರದಿಂದ 25 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಪ್ರಕ್ರಿಯೆ ಟೆಂಡರ್‌ನಲ್ಲಿದೆ. ಹಾಗಾಗಿ ಒಂದು ತಿಂಗಳೊಳಗಾಗಿ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೆ ಪ್ರತಿಭಟನಾಕಾರರು ಪ್ರತಿಕ್ರಿಯಿಸಿ ಕಾಮಗಾರಿ ಆರಂಭಿಸದಿದ್ದಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಇನ್ನು ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ಉಪ ತಹಸೀಲ್ದಾರ್ ಸುರೇಖಾ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.