

ಬೈಲಹೊಂಗಲ: ಮಗನ ಚಿಕಿತ್ಸೆ ವೆಚ್ಚ ಭರಿಸಲು ಹಣ ಬೇಕಾಗಿದ್ದು, ಠೇವಣಿ ಮರಳಿಸುವಂತೆ ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ಅರ್ಬನ್ ಸೌಹಾರ್ದ ಸಹಕಾರಿ ಕಚೇರಿ ಎದುರು ಠೇವಣಿದಾರ ಮಹಿಳೆ, ಮಗನೊಂದಿಗೆ ಉಪವಾಸ ಧರಣಿ ನಡೆಸುತ್ತಿದ್ದಾಳೆ.
ಬಿಪಿ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಮಗನ ಆರೋಗ್ಯವೂ ಸರಿಯಿಲ್ಲ ಹೀಗಾಗಿ ಚಿಕಿತ್ಸೆಗೆ ಹಣದ ಅವಶ್ಯಕತೆ ಇದ್ದು, ಠೇವಣಿ ಹಣ ಮರಳಿಸಬೇಕು ಎಂದು ಒತ್ತಾಯಿಸಿ 50 ವರ್ಷದ ಗಿರಿಜಮ್ಮ ದೇವಲತ್ತಿ ಮಗ ಪ್ರೇಮಕುಮಾರ ಜತೆಗೆ ಧರಣಿ ಕುಳಿತಿದ್ದಾರೆ. ಇನ್ನೊರ್ವ ಠೇವಣಿದಾರ ಮಹಾಂತೇಶ ಕುಸಲಾಪುರ ಕೂಡ ನನ್ನ ಆರೋಗ್ಯವೂ ಕ್ಷೀಣಿಸುತ್ತಿದ್ದು, ಸಹಕಾರಿಯ ಅಧ್ಯಕ್ಷರಾಗಲಿ, ಆಡಳಿತ ಮಂಡಳಿಯಾಗಲಿ ಎರಡು ದಿನ ಕಳೆದರೂ ನಮ್ಮನ್ನು ಭೇಟಿಯಾಗಿಲ್ಲ ಎಂದು ಅಳಲು ತೋಡಿಕೊಂಡರು.
ಬೈಲಹೊಂಗಲ ಠೇವಣಿದಾರರ ಸಂಘದ ಅಧ್ಯಕ್ಷ ಆರ್.ಜಿ. ಶಿವಬಸನ್ನವರ, ಪಿ.ಐ. ಗಣಾಚಾರಿ, ಎಚ್.ಬಿ. ಸುಂಕದ, ನೀಲಪ್ಪ ಕಲ್ಲೂರ, ವಿಜಯಕುಮಾರ ಉಪಾಧ್ಯ, ಈರಯ್ಯ ಬಡಿಗೇರ, ಬಿ.ಎಸ್.ಕೌಜಲಗಿ, ಎಸ್.ಜಿ.ಸಂಕನ್ನವರ, ತಿಪ್ಪಣ್ಣ ಮಾವಿನಕಟ್ಟಿ, ಎಸ್.ಎಂ.ಪಟ್ಟಿಹಾಳ, ಪಿ.ಎಂ. ದಿಬ್ಬದ, ಎಸ್.ಎಂ.ಕಗ್ಗೊಡಿ, ಆರ್.ವೈ. ಉಪ್ಪಾರ ಬೆಂಬಲ ವ್ಯಕ್ತಪಡಿಸಿ, ಈ ಕುರಿತು ಸಹಕಾರ ಇಲಾಖೆ, ಸೌಹಾರ್ದ ಮಂಡಳಿ ಠೇವಣಿದಾರರ ಹಿತ ಕಾಪಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.