

ವಿಜಯಪುರ: ರಾಜ್ಯದಲ್ಲಿ ವಕ್ಫ್ ಬೋರ್ಡ್ ಕಾಯ್ದೆ ರದ್ದುಗೊಳಿಸಲು ಆಗ್ರಹಿಸಿ ಹಿಂದು ಜನಜಾಗೃತಿ ಸಮಿತಿ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್ ತನ್ನ ಕಾನೂನು ದುರುಪಯೋಗ ಪಡಿಸಿಕೊಂಡು ಸರ್ಕಾರಿ ಮತ್ತು ಖಾಸಗಿ ಜಮೀನುಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ಆ ಮೂಲಕ ದೇಶದಲ್ಲಿ 8 ಲಕ್ಷ ಎಕರೆ ಜಮೀನನ್ನು ಕಬಳಿಸಿದೆ. ಇದೊಂದು ದೊಡ್ಡ ಲ್ಯಾಂಡ್ ಜಿಹಾದ್ ಆಗಿದೆ. ಹಾಗಾಗಿ ಈ ಕಾನೂನು ರದ್ದುಗೊಳಿಸಿ ಜಮೀನಿನ ನಿಜವಾದ ಮಾಲೀಕರಿಗೆ ಅದರ ಅಧಿಕಾರವನ್ನು ನೀಡಬೇಕು. ದೇಶದಲ್ಲಿ ಸಮಾನ ನಾಗರಿಕ ಕಾನೂನು ಜಾರಿಗೆ ತರುವ ಮೂಲಕ ಅಲ್ಪಸಂಖ್ಯಾತರ ಹೆಸರಿನಲ್ಲಿ ಜಾರಿಯಲ್ಲಿರುವ ಎಲ್ಲಾ ವಿಶೇಷ ಸೌಲಭ್ಯಗಳು, ಕಾನೂನುಗಳು, ಆಯೋಗಗಳು, ಮಂಡಳಿಗಳು, ಸರ್ಕಾರಿ ಇಲಾಖೆಗಳನ್ನು ರದ್ದುಪಡಿಸಬೇಕು ಮತ್ತು ಎಲ್ಲರಿಗೂ ಸಮಾನ ನಡವಳಿಕೆ ಸಿಗುವಂತಾಗಬೇಕು. ಈ ಬೇಡಿಕೆಗಳನ್ನು ಅಂಗೀಕರಿಸದಿದ್ದರೆ ವಕ್ಫ್ ಕಾನೂನು ವಿರುದ್ಧ ಪ್ರಬಲ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬೆನ್ನಲ್ಲೇ ಹಿಂದು ಕಾರ್ಯಕರ್ತರ ಮೇಲೆ ವಿವಿಧ ರೀತಿಯ ಆಕ್ರಮಣಗಳು ಹೆಚ್ಚಾಗಿವೆ. ಹಿಂದು ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಅವರಿಗೆ ಥಳಿಸುವುದು ಮತ್ತು ಭಯ ನಿರ್ಮಾಣ ಮಾಡುವ ಪ್ರಕ್ರಿಯೆ ನಡೆಯುತ್ತಿವೆ. ಜೈನ್ ಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರು ಮತ್ತು ಯುವ ಬ್ರಿಗೇಡ್‌ನ ವೇಣುಗೋಪಾಲ ಇವರ ಹತ್ಯೆ ಸೇರಿದಂತೆ ಇನ್ನೂ ಹಲವಾರು ಘಟನೆಗಳು ಹಿಂದೂ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿವೆ. ಅಷ್ಟೇ ಅಲ್ಲದೆ ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಪ್ರತಿ ಭಾನುವಾರ ನಡೆಯುತ್ತಿದ್ದ ನಾಗರಕಟ್ಟೆಯ ಪೂಜೆಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಬಕ್ರೀದ್ ಸಮಯದಲ್ಲಿ ಬಾದಾಮಿ, ಶಿಕಾರಿಪುರ, ಶಿರಸಿ ಸೇರಿದಂತೆ ಹಲವೆಡೆ ಅಕ್ರಮವಾಗಿ ಗೋಹತ್ಯೆ ಮಾಡಿ, ಗೋವಿನ ಎಲಬುಗಳನ್ನು ದೇವಸ್ಥಾನ, ಹಿಂದು ಮನೆಗಳ ಎದುರು ಎಸೆದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ಹಾಗಾಗಿ ಹಿಂದು ಕಾರ್ಯಕರ್ತರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ಹಿಂದು ಹೋರಾಟಗಾರರಿಗೆ ರಕ್ಷಣೆ ನೀಡಬೇಕು. ಹಿಂದುಗಳ ಮೇಲೆ ಆಕ್ರಮಣ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜೈನ್ ಸಮಾಜದ ಉಪಾಧ್ಯಕ್ಷ ಮಾನಿಕ ತೋಸನಿವಾಲ, ಶಾಮ್ ಸುಂದರ್, ಪ್ರಕಾಶ ಠಾಕೂರ, ಸುಭಾಷ ಕತ್ರಿ, ಸಂಗನಗೌಡ ಬಾ. ಪಾಟೀಲ, ಡಾ. ರಮೇಶ ಬಿರಾದಾರ, ಜಯಂತ ಮುತ್ತಗಿಕರ, ಬಿಳಿಯನಸಿದ್ಧ ಒಡಿಯರ, ವೆಂಕಟರಮಣ ನಾಯಕ, ಮಲ್ಲಿಕಾರ್ಜುನ್ ಬೊಮ್ಮರೆಡ್ಡಿ, ಲಕ್ಷ್ಮಣ ಇಂಗಳೆ, ಕವಿತಾ ಕೋಲಾರ್, ಗಂಗಾ ವಠಾರ ಮತ್ತಿತರರಿದ್ದರು.