

ರಾಯಚೂರು ಕಾರ್ಮಿಕ ವಿರೋಧಿ 4 ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಮಂಗಳವಾರ ನಗರದ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಮುಂದೆ ಕಾಯ್ದೆಗಳ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.
ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಪರವಾದ ನೀತಿಗಳನ್ನು ವಿರೋಧಿಸಿದರು.
ಪ್ರತಿಭಟನೆಯಲ್ಲಿ ಸಿಐಟಯುನ ಜಿಲ್ಲಾ ಕಾರ್ಯದರ್ಶಿ ಡಿ.ಎಸ್. ಶರಣಬಸವ ಮಾತನಾಡಿ, ದೇಶದಲ್ಲಿ ಬಡತನ, ನಿರುದ್ಯೋಗ, ಅಪೌಷ್ಟಿಕತೆ, ಹಾಗೂ ಗುಣಮಟ್ಟವಲ್ಲದ ಶಿಕ್ಷಣದಿಂದ ಜನರ ಸಂಕಷ್ಟ ಅನುಭವಿಸುತ್ತಿದ್ದಾರೆ, ಕಾರ್ಮಿಕ ಹಕ್ಕುಗಳು, ಮತ್ತು ಸೌಲತ್ತುಗಳು ಕಸಿದುಕೊಳ್ಳಲು ಹೊರಟಿದೆ ಎಂದು ದೂರಿದರು. ಕಾರ್ಮಿಕರ ಕೆಲಸದ ಅವಧಿ, ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಹೋರಾಟದ ಹಕ್ಕು ಭೂತ ಹಕ್ಕುಗಳಿಗೆ ಮಾರಕವಾಗುವಂತೆ ಕಾಯ್ದೆಗಳ ಜಾರಿ ಮಾಡಲಾಗುತ್ತದೆ ಎಂದು ಆರೋಪಿಸಿದರು.
ಕಾರ್ಮಿಕರ ಹಕ್ಕುಗಳ ಜೊತೆಗೆ ಪ್ರತಿಭಟಿಸುವ ಹಕ್ಕನ್ನು ದಮನ ಮಾಡಲು ಪ್ರತಿರೋಧವನ್ನು ಹೇರುತ್ತಿದೆ, ಕಾರ್ಮಿಕರನ್ನು ದೊಡ್ಡ ಪ್ರಮಾಣದಲ್ಲಿ ಶೋಷಣೆಗೆ ಗುರಿಯಾಗುತ್ತಿದೆ, ಕಾರ್ಮಿಕರಲ್ಲಿ ಭಯದ ವಾತಾವರಣ ಸೃಷ್ಟಿಸಲು ಕೇಂದ್ರ ಸರ್ಕಾರ ಕಾರ್ಮಿಕರ ಕಾಯ್ದೆಗಳ ಜಾರಿ ಮಾಡುತ್ತಿದೆ ಎಂದು ಕಿಡಿ ಕಾರಿದರು. ನಾಲ್ಕು ಕಾರ್ಮಿಕರ ಕಾಯ್ದೆಗಳನ್ನು ರದ್ದುಗೊಳಿಸಬೇಕು, ಕಾಯ್ದೆಗಳನ್ನು ಹಿಂಪಡೆಯದಿದ್ದರೆ ಜು.9 ಕ್ಕೆ ಸಾರ್ವತ್ರಿಕ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಾದ ಎಚ್. ಪದ್ಮಾ, ಕಾಶಪ್ಪ, ಕೆ.ಜಿ. ವೀರೇಶ, ಮಹೇಶ ಚಿಕಲಪರ್ವಿ, ಶ್ರೀಶೈಲರೆಡ್ಡಿ, ಅಜೀಜ್ ಜಾಗೀರದಾರ, ಮಲ್ಲಿಕಾರ್ಜುನ ಮನ್ಸಲಾಪೂರ, ಆಂಜನೇಯ ಕುರುಬದೊಡ್ಡಿ, ವರಲಕ್ಷ್ಮೀ, ಗೊಕುರಮ್ಮ, ಶರಣಮ್ಮ ಸೇರಿದಂತೆ ಅನೇಕರು ಇದ್ದರು.