

ನರೇಗಲ್ಲ: ನರೇಗಲ್ಲ- ತೊಂಡಿಹಾಳ ರಸ್ತೆ ಡಾಂಬರೀಕರಣ ಮಾಡಬೇಕು. ಪಟ್ಟಣದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಹಳೇ ಬಸ್ ನಿಲ್ದಾಣದಿಂದ ನಾಡಕಚೇರಿ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಗಜೇಂದ್ರಗಡ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕರವೇ ಜಿಲ್ಲಾಧ್ಯಕ್ಷ ಹನಮಂತ ಅಬ್ಬಿಗೇರಿ ಮಾತನಾಡಿ, ನರೇಗಲ್ಲದಿಂದ ಕೊಪ್ಪಳ, ಹೊಸಪೇಟೆ, ಬೆಂಗಳೂರಿಗೆ ಹೋಗುವ ಮಾರ್ಗವಾಗಿರುವ ನರೇಗಲ್ಲ- ತೊಂಡಿಹಾಳ ರಸ್ತೆ ಕೆಟ್ಟು ಸಂಚಾರಕ್ಕೆ ಬಾರದಂತಾಗಿದೆೆ. ಎಂಟು ಕಿ.ಮೀ ದೂರ ಕ್ರಮಿಸಲು ಒಂದೂವರೆ ತಾಸು ಬೇಕಾಗುತ್ತದೆ. ಇದರಿಂದ ಈ ದಾರಿಯಲ್ಲಿ ಸಾಗುವ ಎಲ್ಲರಿಗೂ ಬಹಳಷ್ಟು ತ್ರಾಸಾಗುತ್ತಿದೆ ಎಂದರು.
ತೊಂಡಿಹಾಳ, ಬಿನ್ನಾಳ, ಬಂಡಿಹಾಳದ ಜನತೆಗೆ ಅತ್ಯಂತ ಹತ್ತಿರದ ಊರೆಂದರೆ ಅದು ನರೇಗಲ್ಲ. ಪಡಿತರ, ಆಸ್ಪತ್ರೆ, ಚಿಕ್ಕಪುಟ್ಟ ಕೆಲಸಗಳಿಗಾಗಿ ನರೇಗಲ್ಲನ್ನೇ ಆಶ್ರಯಿಸಿದ್ದಾರೆ. ನರೇಗಲ್ಲದ ಬಹುತೇಕ ಜಮೀನುಗಳು ಇದೇ ರಸ್ತೆಯಲ್ಲಿದ್ದು, ಅದಕ್ಕೂ ಇದು ಸಂಪರ್ಕದ ರಸ್ತೆಯಾಗಿದೆ. ರೈತರೂ ಸಹ ತಮ್ಮ ಹೊಲಗಳಿಗೆ ಹೋಗಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಆದ್ದರಿಂದ ಈ ತಕ್ಷಣವೇ ದುರಸಿ ಮಾಡಬೇಕು ಎಂದರು. ಜಿಲ್ಲಾ ಗೌರವಾಧ್ಯಕ್ಷ ಉಮೇಶ ಮೇಟಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ, ಶರಣಪ್ಪ ಕರಮುಡಿ, ತೌಸಿಫ್ ಢಾಲಾಯತ್, ನರೇಗಲ್ಲ ಘಟಕಾಧ್ಯಕ್ಷ ಸಿರಾಜ ಹೊಸಮನಿ, ನಬಿಸಾಬ್ ಕಿಲ್ಲೇದಾರ, ಶರಣಪ್ಪ ಉಪ್ಪಾರ, ಮುತ್ತಣ್ಣ ಚೌಡನವರ, ಲೋಕೇಶ ಸುತಾರ, ಸಾವಿತ್ರಿ ಅತ್ತಿಗೇರಿ, ರಾಮನಗೌಡ, ಇತರರು ಪಾಲ್ಗೊಂಡಿದ್ದರು.