ಅವೈಜ್ಞಾನಿಕ ರಸ್ತೆ ಸರಿಪಡಿಸಲು ಒತ್ತಾಯ: ತೂಬಿನಕೆರೆಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Protest demanding repair of unscientific road Mandya
Published on

ಮಂಡ್ಯ: ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿನ ಅವೈಜ್ಞಾನಿಕ ಕಾಮಗಾರಿಯನ್ನು ಸರಿಪಡಿಸುವಂತೆ ಒತ್ತಾಯಿಸಿ ತಾಲೂಕಿನ ತೂಬಿನಕೆರೆ-ಜಕ್ಕನಹಳ್ಳಿ ರಸ್ತೆ ಬಳಿ ವಿವಿಧ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.

ಕದಂಬ ಸೈನ್ಯ(ಕನ್ನಡ ಸಂಘಟನೆ), ಭಾರತೀಯ ಕಿಸಾನ್ ಸಂಘ, ಕದಸಂಸ (ಸ್ವಾಭಿಮಾನಿ ಕೃಷ್ಣಪ್ಪ ಬಣ) ಹಾಗೂ ಗ್ರಾಮಸ್ಥರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದಲ್ಲದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಪ್ರತಿನಿತ್ಯ ಸಾವಿರಾರು ಭಾರೀ ವಾಹನಗಳು, ಲಘು ವಾಹನಗಳು, ದ್ವಿಚಕ್ರ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಆದರೆ ಅವೈಜ್ಞಾನಿಕ ಸರ್ವೀಸ್ ರಸ್ತೆಯಿಂದಾಗಿ ಈಗಾಗಲೇ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಸರ್ವೀಸ್ ರಸ್ತೆಯಲ್ಲಿ ಪುಟ್‌ಪಾತ್, ಚರಂಡಿ, ಬಸ್ ನಿಲ್ದಾಣ ಹಾಗೂ ತಡೆಗೋಡೆಯನ್ನು ತಕ್ಷಣವೇ ಸರಿಪಡಿಸುವಂತೆ ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ್ದ ಪ್ರಾಧಿಕಾರದ ಅಧಿಕಾರಿಗಳಾದ ಅರುಣ್ ಹಾಗೂ ರಾಜೇಂದ್ರ ಅವರನ್ನು ಪ್ರತಿಭಟನಾಕಾರರು ಹಾಗೂ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಗ್ರಾಮಸ್ಥರು ಪ್ರಶ್ನೆಗೆ ಅಧಿಕಾರಿಗಳು ತಬ್ಬಿಬ್ಬಾದರು. ಬಳಿಕ ಅಧಿಕಾರಿಗಳು ಮೂರು ತಿಂಗಳ ಕಾಲಾವಕಾಶ ಪಡೆದು ಸರಿಪಡಿಸುವ ಭರವಸೆ ನೀಡಿದರು. ಇದಕ್ಕೆ ಸ್ಪಂದಿಸಿದ ಗ್ರಾಮಸ್ಥರು ಶೀಘ್ರದಲ್ಲೇ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಅಂತೆಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅಪಾಯದಲ್ಲಿ ಇರುವ ಮನೆಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಿ ನಿವಾಸಿಗಳಿಗೆ ಬದಲಿ ನಿವೇಶನ ನೀಡಿ ಹೆಚ್ಚಿನ ಪರಿಹಾರ ಕೊಡಬೇಕು. ಈ ಮೂಲಕ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕು. ರಸ್ತೆ ಎರಡು ಬದಿಯಲ್ಲಿ ಪ್ರಯಾಣಿಕರ ತಂಗುದಾಣ ಹಾಗೂ ಒಳ ಚರಂಡಿ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ರಮೇಶ್‌ರಾಜು ಹಾಡ್ಯ, ಜಿಲ್ಲಾಧ್ಯಕ್ಷ ಬಿ.ಪಿ.ಅಪ್ಪಾಜಿ ಹಳೇಬೂದನೂರು, ಕದಸಂಸ(ಸ್ವಾಭಿಮಾನ ಕೃಷ್ಣಪ್ಪ ಬಣ)ದ ಜಿಲ್ಲಾ ಸಂಚಾಲಕ ಮೋಹನ್ ಚಿಕ್ಕಮಂಡ್ಯ, ತೂಬಿನಕೆರೆ ಗ್ರಾಮದ ಪ್ರಕಾಶ್, ರಾಮಲಿಂಗಯ್ಯ, ಅಚ್ಯುತ, ಜಯರಾಮ, ಸ್ವಾಮಿ ಎಲೆಚಾಕನಹಳ್ಳಿ ಶ್ರೀಧರ್, ರಾಮಣ್ಣ, ಸಿದ್ದಲಿಂಗು, ರೇವಣ್ಣ, ನಾಗಣ್ಣ, ಚನ್ನೇಗೌಡ, ಕುಮಾರ್, ಜಯಮ್ಮ, ಕದಂಬ ಸೈನ್ಯ ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಆರಾಧ್ಯ ಗುಡಿಗೇನಹಳ್ಳಿ, ಕಿಸಾನ್ ಸಂಘದ ಪದಾಧಿಕಾರಿಗಳಾದ ರುದ್ರಪ್ಪ ಬೂದನೂರು, ಬಸವರಾಜು, ಕಲ್ಲೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net