

ಗಜೇಂದ್ರಗಡ: ರೋಣ ಮತಕ್ಷೇತ್ರದಾದ್ಯಂತ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಇನ್ನೆರಡು ತಿಂಗಳಲ್ಲಿ ದುರಸ್ತಿಪಡಿಸದಿದ್ದರೆ ಎಲ್ಲೆಡೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಎಚ್ಚರಿಸಿದರು.
ಹಾಳದ ರಸ್ತೆ ದುರಸ್ತಿ ಹಾಗೂ ಅಭಿವೃದ್ಧಿ ಮರೆತ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಟ್ಟಣದ ಗದಗ ರಸ್ತೆಯಲ್ಲಿ ಬಿಜೆಪಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ರಾಜ್ಯ ಹೆದ್ದಾರಿ ಹಾಗೂ ಗ್ರಾಮೀಣ ರಸ್ತೆ ದುರಸ್ತಿಗೆ ರಾಜ್ಯ ಸರ್ಕಾರದ ಬಳಿ ದುಡ್ಡು ಇಲ್ಲದಂತಾಗಿದೆ. ಬೊಕ್ಕಸ ಖಾಲಿಯಾಗಿದೆ. ಮುಂದಿನ ದಿನಮಾನಗಳಲ್ಲಿ ಸರ್ಕಾರಿ ನೌಕರರಿಗೆ ವೇತನ ನೀಡಲು ಸಹ ಹಣ ಇಲ್ಲದಂತಾಗುತ್ತದೆ ಎಂದರು.
ರೋಣ ಬಿಜೆಪಿ ಮಂಡಲ ಅಧ್ಯಕ್ಷ ಉಮೆಶ ಮ್ಲಲಾಪುರ ಮಾತನಾಡಿ, ಮತಕ್ಷೇತ್ರದ ಜನಪ್ರತಿನಿಧಿಗಳು ಕ್ಷೇತ್ರದ ಅಭಿವೃದ್ದಿ ಮರೆತಿದ್ದಾರೆ ಎಂದರು.
ಗದಗ ರಸ್ತೆಯ ರೇಣುಕಾಚಾರ್ಯ ಮಠದ ಮುಂಭಾಗದಲ್ಲಿ ನೂರಾರು ಕಾರ್ಯಕರ್ತರು ಕೆಲಕಾಲ ವಾಹನ ಸಂಚಾರ ತಡೆ ನಡೆಸಿದರು. ಇದರಿಂದ ಸಂಚಾರದಲ್ಲಿ ವ್ಯತ್ಯಯವಾಗಿತ್ತು.
ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ, ಶಿವಾನಂದ ಮಠದ, ಮುತ್ತು ಕಡಗದ, ಮಹಾಂತೇಶ ಪೂಜಾರ, ಬಾಳಾಜಿರಾವ್ ಭೋಸಲೆ, ಬಸವರಾಜ ಕಡಬಲಕಟ್ಟಿ, ವೀರಪ್ಪ ಪಟ್ಟಣಶೆಟ್ಟಿ, ನೀಲಪ್ಪ ಗುರಿಕಾರ, ಡಿ.ಜಿ. ಕಟ್ಟಿಮನಿ, ಶಿವಕುಮಾರ ಜಾಧವ, ದಾನು ರಾಠೋಡ, ಶಿವಾನಂದ ಅರಳಿ, ಮಹಾಂತೇಶ ಸೋಮನಕಟ್ಟಿ, ಇತರರು ಇದ್ದರು