

ಮೈಸೂರು: ಹಳೇ ಕೆಸರೆಯಿಂದ ಕಸ ವಿಲೇವಾರಿ ಘಟಕವನ್ನು ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಘಟಕದ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಜನಸ್ಪಂದನ ಸಮಿತಿ, ಸಿದ್ದಲಿಂಗಪುರ ಗ್ರಾಮ ಪಂಚಾಯಿತಿ ಸದಸ್ಯರ ನೇತೃತ್ವದಲ್ಲಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದಲಿಂಗಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸರೆ ಗ್ರಾಮದ ಸರ್ವೇ ನಂ.309 ಮತ್ತು 318ರಲ್ಲಿ ಮೈಸೂರು ಪಾಲಿಕೆ ವತಿಯಿಂದ ಕಸ ವಿಲೇವಾರಿ ಘಟಕವನ್ನು ನಿರ್ಮಿಸಿದ್ದು, ಮೈಸೂರು ನಗರದಲ್ಲಿ ಸಂಗ್ರಹಿಸಿದ ಕಸವನ್ನು ಇಲ್ಲಿ ಹಾಕಲಾಗುತ್ತಿದೆ.
ಆದರೆ, ತ್ಯಾಜ್ಯವನ್ನು ಸರಿಯಾಗಿ ವಿಲೇಮಾರಿ ಮಾಡುತ್ತಿಲ್ಲ. ಇದರಿಂದಾಗಿ ಅನೈರ್ಮಲ್ಯ ಉಂಟಾಗಿದೆ. ಕಸ ಕೊಳೆತು ವಾಸನೆ ಬರುತ್ತಿದೆ. ಇದರಿಂದ ಘಟಕದ ಸುತ್ತಲೂ ವಾಸಿಸುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ರೋಗ-ರುಜಿನಗಳೂ ಬರುತ್ತಿವೆ. ಆದ್ದರಿಂದ ಇಲ್ಲಿ ಕಸ ಹಾಕುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವಿದ್ಯಾರಣ್ಯಪುರಂನ ಸೂಯೇಜ್ ಫಾರ್ಮ್‌ನಲ್ಲಿ ಕಸದ ರಾಶಿಯನ್ನು ಕರಗಿಸಲು, ಅಲ್ಲಿಯ ನಿವಾಸಿಗಳ ಆರೋಗ್ಯದ ಹಿತದೃಷ್ಟಿಯಿಂದ ಪಾಲಿಕೆ ಹಳೇ ಕೆಸರೆಯ ಘಟಕದಲ್ಲಿ ಕಸ ಹಾಕುತ್ತಿದೆ. ಹಾಗಾದರೆ ಇಲ್ಲಿ ವಾಸಿಸುವವರು ಮನುಷ್ಯರಲ್ಲವೇ?
ನಗರದಲ್ಲಿ ನಿತ್ಯ ಸಂಗ್ರಹವಾಗುವ 200 ಟನ್ ಕಸದಲ್ಲಿ 100 ಟನ್ ಕಸವನ್ನು ಈ ಘಟಕದಲ್ಲಿ ತಂದು ಹಾಕಲಾಗುತ್ತಿದೆ. ಇದರಿಂದ ಸುತ್ತಲಿನ ಗ್ರಾಮ, ಪ್ರದೇಶಗಳಿಗೆ ದುರ್ವಾಸನೆ ಹಬ್ಬುತ್ತಿದೆ. ಇಲ್ಲಿಯ ಜನರ ಸ್ವಾಸ್ಥೃ ಹಾಳು ಮಾಡಲಾಗುತ್ತಿದೆ ಎಂದು ಪಾಲಿಕೆ ವಿರುದ್ಧ ಕಿಡಿಕಾರಿದರು.
ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್ ಅವರಿಗೆ ಸಿದ್ದಲಿಂಗಪುರ ಗ್ರಾಮ ಪಂಚಾಯಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. ಪ್ರತಿಭಟನಾಕಾರರ ಸಮಸ್ಯೆ ಆಲಿಸಿದ ಅವರು, ದುರ್ವಾಸನೆ ತಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಪ್ರತಿಭಟನಾಕಾರರು ಮಣಿಯಲಿಲ್ಲ. ಮಂಗಳವಾರವೂ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದಾರೆ.
ಸಿದ್ದಲಿಂಗಪುರ ಗ್ರಾಪಂ ಅಧ್ಯಕ್ಷ ಸಿ.ಮಹದೇಶ್, ಸದಸ್ಯರಾದ ರೇವಣ್ಣ, ವಿಶ್ವನಾಥ್, ಜ್ಯೋತಿ, ಲಲಿತಮ್ಮ, ಶ್ರೀನಿವಾಸ್, ಅರ್ಪಿತಾ, ಸುಜಾತಾ, ಆಶಾ ಸೇರಿದಂತೆ 46 ಗ್ರಾಪಂ ಸದಸ್ಯರು ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.