ತಾಮ್ರಗುಂಡಿ ಕೆರೆಗೆ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆ

Protest demanding release of water to Tamragundi lake
Published on

ಮುಂಡರಗಿ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮುಖ್ಯಕಾಲುವೆ ಮೂಲಕ ತಾಮ್ರಗುಂಡಿ ಕೆರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಬರದೂರ, ತಾಮ್ರಗುಂಡಿ ಭಾಗದ ರೈತರು ಪಟ್ಟಣದ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಮುಖ್ಯಗೇಟ್ ಬಂದ್ ಮಾಡಿ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಇಟಗಿ, ತಾಲೂಕು ರೈತ ಸಂಘದ ಅಧ್ಯಕ್ಷ ಶರಣಪ್ಪ ಕಂಬಳಿ, ರೈತ ಪ್ರಮುಖ ಎಚ್.ಬಿ. ಕುರಿ ಮಾತನಾಡಿ, ಸಮರ್ಪಕವಾಗಿ ಮುಂಗಾರು ಮಳೆ ಬಾರದ ಕಾರಣ ಈಗಾಗಲೆ ಬಿತ್ತನೆ ಮಾಡಿದ ಕಬ್ಬು, ಗೋವಿನಜೋಳ, ಹತ್ತಿ, ಸೂರ್ಯಕಾಂತಿ, ಉಳ್ಳಾಗಡ್ಡಿ ಇತರ ಬೆಳೆಗಳು ಒಣಗುತ್ತಿವೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಕಾಲುವೆ ಮತ್ತು ಕೆರೆಗೆ ನೀರನ್ನು ಹರಿಸಬೇಕೆಂದು ಜೂ. 23ಕ್ಕೆ ಪ್ರತಿಭಟನೆ ನಡೆಸಿದಾಗ ಬುಧವಾರ ಹರಿಸಲಾಗುವುದು ಎಂದಿದ್ದರು. ಆದರೆ, ಶನಿವಾರ ನೀರು ಹರಿಸಿದರು. ಅದು ತಾಮ್ರಗುಂಡಿ ಕೆರೆಗೆ ನೀರು ಸರಿಯಾಗಿ ಬರುತ್ತಿಲ್ಲ. ತಾಮ್ರಗುಂಡಿ ಕೆರೆಗೆ ಸಮರ್ಪಕವಾಗಿ ನೀರು ಹರಿಸಿ ತುಂಬಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ಸ್ಥಳಕ್ಕೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಎಇಇ ಬಸವರಾಜ ಎ., ಸಿಪಿಐ ಮಂಜುನಾಥ ಕುಸುಗಲ್ಲ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು. ಮಂಗಳವಾರ ರಾತ್ರಿಯಿಂದ ಬುಧವಾರ ಸಂಜೆ 7ಗಂಟೆಯವರೆಗೆ ನಿರಂತರವಾಗಿ ತಾಮ್ರಗುಂಡಿ ಕೆರೆಗೆ ನೀರು ಹರಿಸಲಾಗುವುದು. ನಂತರ ಐದಾರು ದಿನ ಬಿಟ್ಟು ಮತ್ತೆ ತಾಮ್ರಗುಂಡಿ ಕೆರೆಗೆ ನೀರು ಹರಿಸಲಾಗುವುದು ಎಂದು ಎಇಇ ಬಸವರಾಜ ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಕೈಬಿಟ್ಟರು.

ಶರಣಪ್ಪ ಹಳ್ಳಿಕೇರಿ, ಅಂದಪ್ಪ ಉಳ್ಳಾಗಡ್ಡಿ, ಹುಚ್ಚಪ್ಪ ಹಂದ್ರಾಳ, ನಿಂಗಪ್ಪ ತೋಟಪ್ಪನವರ, ಅಂದಪ್ಪ ಕಲ್ಲಳ್ಳಿ, ಸತ್ಯಪ್ಪ ಗೋಡಿ, ಲಕ್ಷ್ಮಣ ತಳವಾರ, ಹನುಮಂತ ಭಜಂತ್ರಿ, ಈಶಪ್ಪ, ಪ್ರವೀಣ ಶಿರೂರ, ಈರಣ್ಣ ಕಲ್ಲಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net