

ಮದ್ದೂರು: ಪಟ್ಟಣದ ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಬಿಡುಗಡೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ (ಮದ್ದೂರು ಶಾಖೆ) ವತಿಯಿಂದ ಪಟ್ಟಣದ ಪುರಸಭೆ ಆವರಣದಲ್ಲಿ ಗುರುವಾರ ಪ್ರತಿಭಟನೆ ಮಾಡಲಾಯಿತು.
ಸಂಘದ ತಾಲೂಕು ಶಾಖೆಯ ಅಧ್ಯಕ್ಷ ಕಾಂತರಾಜು ಮಾತನಾಡಿ, ಪಟ್ಟಣದ ಪುರಸಭೆಯ ಸ್ವಚ್ಛತಾ ವಾಹನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಹೊರ ಗುತ್ತಿಗೆಗೆ ವಾಹನ ಚಾಲಕರು, ಡಾಟಾ ಆಪರೇಟರ್ಸ್‌ಗಳು, ಸ್ಯಾನಿಟರಿ ಸೂಪರ್‌ವೈಸರ್ಸ್, ವಾಚ್‌ಮೆನ್‌ಗಳಿಗೆ ಕಳೆದ ಸೆಪ್ಟೆಂಬರ್‌ನಿಂದ ವೇತನ ಬಿಡುಗಡೆ ಮಾಡಿಲ್ಲ. ಇದರಿಂದ ದೈನಂದಿನ ಜೀವನ ನಿರ್ವಹಣೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ, ಮನೆ ಬಾಡಿಗೆ ಪಾವತಿಸಲು ತಿಂಗಳ ವೇತನವನ್ನೇ ನಂಬಿಕೊಂಡಿರುವ ನಮಗೆ ತುಂಬ ಸಮಸ್ಯೆಯಾಗಿದೆ. ಆದ್ದರಿಂದ ಶೀಘ್ರವೇ ವೇತನ ಪಾವತಿ ಮಾಡಿ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಶಿವಣ್ಣ, ಪದಾಧಿಕಾರಿಗಳಾದ ಬಸವರಾಜು, ನವೀನ್, ಕೀರ್ತಿ, ಶಂಕರ್, ದರ್ಶನ್, ಸುರೇಶ್, ಸುನೀಲ್, ಅನಿಲ್, ಅವಿನ್, ಜಗದೀಶ್‌ಕುಮಾರ್, ಸೈಯದ್, ಮುನೀಶ್, ಸೌಮ್ಯಾ ಇದ್ದರು.