ವಿಮೆ ಹಣ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

SRS Strike
Published on

ಶಿರಸಿ: ಬೆಳೆ ವಿಮೆ ಪರಿಹಾರ, ಸಮರ್ಪಕ ವಿದ್ಯುತ್ ಪೂರೈಕೆ ಮತ್ತಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ದಾಸನಕೊಪ್ಪದಲ್ಲಿ ರೈತರು ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ ಮಾತನಾಡಿ, ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಸಹಕಾರಿ ಸಂಘ ಹಾಗೂ ಬ್ಯಾಂಕ್‌ಗಳಲ್ಲಿ ತೆಗೆದ ಸಾಲ ಮರುಪಾವತಿ ಈಗ ರೈತನಿಂದ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೈತರ ಬೆಳೆ ಸಾಲವನ್ನು ರಾಜ್ಯ ಸರ್ಕಾರ ಸಂಪೂರ್ಣ ಮನ್ನಾ ಮಾಡಬೇಕು. ಅತಿವೃಷ್ಟಿಯಿಂದ ಬೆಳೆ ಹಾನಿಯಾದರೂ ಬೆಳೆ ವಿಮೆ ಕಂತು ತುಂಬಿಸಿಕೊಂಡ ಕಂಪನಿಗಳು ರೈತನಿಗೆ ಸೂಕ್ತ ಪರಿಹಾರ ಒದಗಿಸುತ್ತಿಲ್ಲ. ತಕ್ಷಣವೇ ರೈತರ ಬ್ಯಾಂಕ್ ಖಾತೆಗಳಿಗೆ ಯೋಗ್ಯ ಬೆಳೆ ವಿಮೆ ನೀಡುವ ಜತೆಗೆ ಸರ್ಕಾರಗಳೂ ಸಹ ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಗೊಂಡು ಐದು ವರ್ಷಗಳು ಕಳೆದಿವೆ. ಆದರೆ, ಇದುವರೆಗೂ ಪೂರ್ಣಗೊಂಡಿಲ್ಲ. ಇನ್ನೊಂದೆಡೆ ಧೂಳಿನ ಪ್ರಮಾಣ ಅಧಿಕವಾಗಿದ್ದು, ಹೆದ್ದಾರಿ ಪಕ್ಕದ ರೈತರ ಹೊಲಗಳಲ್ಲಿ ಬೆಳೆ ಬೆಳೆಯಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಅರಣ್ಯ ಇಲಾಖೆಯಿಂದ ದಾಸನಕೊಪ್ಪ ಹೋಬಳಿಯಲ್ಲಿ ರೈತರ ಮೇಲೆ ದಬ್ಬಾಳಿಕೆ ಜೋರಾಗಿದೆ. ಅತಿಕ್ರಮಣ ಮಾಡಿದ್ದಾರೆ ಎಂಬ ಆರೋಪದಲ್ಲಿ ಅಡಕೆ ಗಿಡಗಳನ್ನೂ ಸಹ ಕಡಿದು ತೊಂದರೆ ನೀಡಿದ್ದಾರೆ ಎಂದು ದೂರಿದರು.

ಕೊರ್ಲಕಟ್ಟಾ ಸೇವಾ ಸಹಕಾರಿ ಸಂಘದ ನಿರ್ದೇಶಕ ರಾಜೇಶ ನಾಯ್ಕ ಮಾತನಾಡಿ, ಅಡಕೆ ಬೆಳೆ ಹಾನಿಯಾದ್ರೆ ಅಧಿಕಾರಿಗಳು ನಮ್ಮ ಕ್ಷೇತ್ರಕ್ಕೆ ಬಂದು ಪೋಟೋ ಹೊಡ್ಕೊಂಡು ಹೋಗುತ್ತಾರೆ. ಆದರೆ, ಬೆಳೆ ವಿಮೆ ಮಂಜೂರಿಗೆ ಮಾತ್ರ ನಾವು ಹೋರಾಟ ನಡೆಸಬೇಕು. ನಮ್ಮಿಂದ ಬೆಳೆ ವಿಮೆ ತುಂಬಿಸಿಕೊಳ್ಳುವಾಗ ಯಾವುದೇ ರೀತಿಯ ಸಬೂಬು ಹೇಳದ ಅಧಿಕಾರಿಗಳು, ವಿಮಾ ಪರಿಹಾರ ನೀಡುವಾಗ ನೀವು ಮಿಶ್ರ ಬೆಳೆ ಬೆಳೆದಿದ್ದೀರಿ ಎಂದು ಆರೋಪಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಹೋರಾಟ ಮಾಡಿಯೇ ನಾವು ಪರಿಹಾರ ಪಡೆದಿದ್ದು, ಈ ವರ್ಷವೂ ಅದೇ ರೀತಿ ಆಗುತ್ತಿದೆ. ರೈತರ ಬೇಡಿಕೆಗೆ ಕಿಮ್ಮತ್ತು ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬನವಾಸಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿನಯ ಗೌಡ ಮಾತನಾಡಿ, ಶುಂಠಿ, ಭತ್ತಕ್ಕೆ ಸರ್ಕಾರ ನೀಡುವ ಸಹಾಯಧನ ಸರಿಯಾಗಿಲ್ಲ. ಅಧಿಕಾರಿಗಳಾಗಲಿ, ವಿಮಾ ಕಂಪನಿಯಾಗಲೀ ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ. ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಕ್ಕರಷ್ಟೇ ರೈತರ ಪ್ರಗತಿ ಸಾಧ್ಯ. ರೈತ ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸುವುದು ಸರ್ಕಾರಗಳಿಗೆ ನಾಚಿಕೆಗೇಡಿನ ಸಂಗತಿ. ಮಳೆಯಕಾರಣ ಬನವಾಸಿ ಭಾಗದಲ್ಲಿ ಬಹುತೇಕ ರೈತರು ಎರಡನೇ ಬಾರಿ ನಾಟಿ ಮಾಡಿದ್ದಾರೆ. ಅಡಕೆಗೆ ವಿಮೆ ಕಟ್ಟಿದಷ್ಟೂ ಪರಿಹಾರ ಸಿಗುತ್ತಿಲ್ಲ. ಬನವಾಸಿ, ದಾಸನಕೊಪ್ಪದಲ್ಲಿ ಭತ್ತದ ಗೋದಾಮು ನಿರ್ಮಿಸಿ ಸರ್ಕಾರ ಸಹಾಯಧನದಲ್ಲಿ ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.

ಬದನಗೋಡ ಗ್ರಾಮ ಪಂಚಾಯಿತಿ ಸದಸ್ಯ ಜಯಪುತ್ರ ಮಾತನಾಡಿ, ಶಿರಸಿ ಹಾವೇರಿ ರಸ್ತೆ ಕಾಮಗಾರಿ ಮುಂದುವರಿದಿಲ್ಲ. ಟೋಲ್ ನಾಕಾ ನಿರ್ಮಾಣಕ್ಕಾಗಿ ಇಲ್ಲಿಯ 19 ರೈತರಿಗೆ ನೊಟೀಸ್ ನೀಡಿದ್ದಾರೆ. ರೈತರ ಭೂಮಿ ಬಿಟ್ಟು ಬೇರೆಲ್ಲಾದರೂ ಟೋಲ್ ನಿರ್ಮಿಸಲಿ. ಬದನಗೋಡ 12 ಸಾವಿರ ಜನಸಂಖ್ಯೆ ಇದೆ. ಇದನ್ನು ಹೋಬಳಿಯಾಗಿ ಬದಲಾವಣೆ ಮಾಡಿ ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಉಪವಿಭಾಗಾಧಿಕಾರಿ ಕೆ. ಕಾವ್ಯಾರಾಣಿ, ತಹಸೀಲ್ದಾರ್ ಶ್ರೀಧರ ಮುಂದಲಮನಿ ಅವರಿಗೆ ರೈತರು ಮನವಿ ಸಲ್ಲಿಸಿದರು.

ಮೂರು ತಾಸು ಹೋರಾಟ

ಬೆಳಗ್ಗೆ 10ಗಂಟೆಯ ವೇಳೆ ಬನವಾಸಿ, ದಾಸನಕೊಪ್ಪ ಸುತ್ತಲಿನ 300ಕ್ಕೂ ಅಧಿಕ ರೈತರು ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಇದರಿಂದಾಗಿ ಶಿರಸಿಯಿಂದ ಹಾವೇರಿಗೆ ಹೋಗುವ ವಾಹನಗಳು, ಮಳಗಿ ಮತ್ತು ಬನವಾಸಿ ಭಾಗಕ್ಕೆ ತೆರಳುವ ವಾಹನಗಳು ಮೂರು ತಾಸಿಗೂ ಅಧಿಕ ಕಾಲ ನಿಲ್ಲಬೇಕಾಯಿತು.

ಅರಣ್ಯ ಭೂಮಿ ಅತಿಕ್ರಮಣ ಮಾಡಿ ಕೃಷಿ ಮಾಡುತ್ತಿರುವವರಿಗೆ ಪರಿಹಾರ ನೀಡಲು ಪಹಣಿಯಲ್ಲಿ ರೈತನ ಹೆಸರು ಇಲ್ಲ ಎನ್ನುತ್ತಾರೆ. ಇಂದಿನ ದಿನಗಳಲ್ಲಿ ದೇಶದಲ್ಲಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವವರು ರೈತರು. ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ತೀವ್ರವಾಗಿದೆ. ರೈತನಿಗೆ ಸೂಕ್ತ ಪರಿಹಾರ ನೀಡಬೇಕು. ಸತೀಶ ನಾಯ್ಕ, ರೈತ ಸಂಘದ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net