

ಬ್ಯಾಡಗಿ: ಬೆಳೆ ವಿಮೆ ಪರಿಹಾರ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ತಾಲೂಕು ರೈತ ಸಂಘ ಹಾಗೂ ಹಾಗೂ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ತಹಸೀಲ್ದಾರ್ ಕಾರ್ಯಾಲಯ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ತಾಲೂಕು ರೈತ ಹೋರಾಟ ಸಮಿತಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ್ ಮಾತನಾಡಿ, ಕಳೆದ ವರ್ಷ ತಾಲೂಕಿನ ಸಾವಿರಾರು ರೈತರು ಬೆಳೆ ವಿಮೆ ಕಂತು ತುಂಬಿದ್ದರು. ಆದರೆ, ವಿಮೆ ತುಂಬಿ ವರ್ಷ ಗತಿಸಿದರೂ ಪೂರ್ಣ ಪ್ರಮಾಣದಲ್ಲಿ ಹಣ ನೀಡಿಲ್ಲ, ಮಧ್ಯಂತರ ಪರಿಹಾರವಾಗಿ ಶೇ. 25 ವಿತರಿಸಿ ಕೈತೊಳೆದುಕೊಂಡ ಖಾಸಗಿ ವಿಮಾ ಕಂಪನಿಗಳು ರೈತರಿಗೆ ಮೋಸ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ, ತೋಟಗಾರಿಕೆ ಇಲಾಖೆಗಳು ಸರ್ಕಾರದ ನಿರ್ದೇಶನದಂತೆ ಮುಂಗಾರು, ಹಿಂಗಾರು ಬೆಳೆ ವಿಮೆ ಕಂತು ತುಂಬಿಸಿಕೊಳ್ಳಲು ಅವಧಿ ನಿಗದಿ ಮಾಡುತ್ತವೆ. ಆದರೆ, ವಿಮೆ ಹಣ ಬಿಡುಗಡೆ ಅವಧಿ ಘೋಷಣೆ ಮಾಡುವುದಿಲ್ಲ. ಜೀವ ವಿಮೆ ಹಾಗೂ ಇತ್ಯಾದಿ ವಿಮೆ ಯೋಜನೆಗಳಲ್ಲಿ ಹಣ ತುಂಬಿಸಿಕೊಂಡ ಬಳಿಕ ಮರಳಿ ನೀಡುವ ಅವಧಿ ಮುದ್ರಿಸಿರುತ್ತಾರೆ. ರೈತರ ಬೆಳೆ ವಿಮೆಗೆ ಏಕೆ ಈ ನಿಯಮ ಅನ್ವಯವಾಗಲ್ಲ. ಸರ್ಕಾರ ಈ ಬಾರಿ ಹೊಸ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಫಿರೋಜ್ ಷಾ ಸೋಮನಕಟ್ಟೆ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಜೆಡಿಎಸ್ ತಾಲೂಕಾಧ್ಯಕ್ಷ ಮೋಹನ ಭಿನ್ನಾಳ, ಕಾರ್ಯಕರ್ತರಾದ ಈರಪ್ಪ ಸಂಕಣ್ಣನವರ, ನಿಂಗಪ್ಪ ಮಾಗೋಡ, ಶಶಿಧರಸ್ವಾಮಿ ಗೊಲ್ಲರಹಳ್ಳಿಮಠ, ಬಿ.ಬಿ. ಬಂಗೇರ, ಮಂಜಪ್ಪ ತಿಮಕಾಪುರ, ಮೃತ್ಯುಂಜಯ ಕಡೇಮನಿ, ಗಣೇಶಪ್ಪ ಸಂಕಣ್ಣನವರ, ಈರಪ್ಪ ಓಲೇಕಾರ, ಪುಟ್ಟಪ್ಪ ಬಾರ್ಕಿ ಮಲಕಪ್ಪ ಸಂಕಣ್ಣವರ ಇದ್ದರು.