ಕ್ರಿಮಿನಲ್ ಪ್ರಕರಣ ದಾಖಲಿಸಲು ಒತ್ತಾಯಿಸಿ ಪ್ರತಿಭಟನೆ

30 yelandur 01
ಸಮಾಜ ಕಲ್ಯಾಣ ಇಲಾಖೆ ಗುತ್ತಿಗೆ ನೌಕರ ಗುರುಸ್ವಾಮಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಕಚೇರಿ ಮುಂಭಾಗ ದಲಿತ ಸಂಘರ್ಷ ಸಮಿತಿಯ ಸದಸ್ಯರು ಯಳಂದೂರಿನಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಇಲಾಖೆಯ ಡಿ.ಡಿ. ಹಾಗೂ ಸಹಾಯಕ ನಿರ್ದೇಶಕರು ಭೇಟಿ ನೀಡಿದ್ದರು.
Published on

ಯಳಂದೂರು: ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿರುವ ಗುರುಸ್ವಾಮಿ ಕಚೇರಿ ಮಾಹಿತಿಯನ್ನು ಸೋರಿಕೆ ಮಾಡಿ, ಇಲ್ಲಿನ ಸಹಾಯಕ ನಿರ್ದೇಶಕರಿಗೆ ಧಮ್ಕಿ ಹಾಕಿದ್ದಲ್ಲದೆ, ಸೇವೆಯಿಂದ ವಜಾಗೊಂಡಿದ್ದರೂ ಕಚೇರಿಗೆ ಬರುತ್ತಿದ್ದು ಕೂಡಲೇ ಆತನ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಗುರುಸ್ವಾಮಿ ಕಳೆದ 10 ವರ್ಷಗಳಿಂದ ಇದೇ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಆದರೆ ಈತ ಕಚೇರಿಯ ಮಾಹಿತಿಯನ್ನು ಸೋರಿಕೆ ಮಾಡಿ ಕೆಲವು ಸಂಘಟನೆಗಳಿಗೆ ಮಾಹಿತಿ ನೀಡುತ್ತಿದ್ದ. ಈ ಬಗ್ಗೆ ದಸಂಸ ಕಳೆದ ವರ್ಷ ಡಿಸೆಂಬರ್‌ನಲ್ಲೇ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಮತ್ತು ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿತ್ತು. ಆ ದೂರಿನ ಅನ್ವಯ ಈತನ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಪತ್ರವನ್ನು ಉಪ ನಿರ್ದೇಶಕರಿಗೆ ನೀಡಲಾಗಿತ್ತು. ಈ ಬಗ್ಗೆ ಉಪ ನಿರ್ದೇಶಕರು ಕಳೆದ ಮಾರ್ಚ್ ತಿಂಗಳಲ್ಲಿ ಈತನ ಮೇಲೆ ಅವ್ಯವಹಾರದ ಆರೋಪದಡಿ ವಜಾ ಮಾಡಿ ಶಿಸ್ತು ಕ್ರಮ ಜರುಗಿಸುವಂತೆ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದ್ದರು.

ಇದರ ಅನ್ವಯ ಕಳೆದ ಮಾರ್ಚ್ 13 ರಂದು ಆತನನ್ನು ಕೆಲಸಕ್ಕೆ ತೆಗೆದುಕೊಂಡಿದ್ದ ಖಾಸಗಿ ಏಜೆನ್ಸಿಗೆ ಸಹಾಯಕ ನಿರ್ದೇಶಕರು ಹೊರ ಸಂಪನ್ಮೂಲ ನೌಕರಿಯಿಂದ ವಜಾಗೊಳಿಸುವಂತೆ ಪತ್ರ ಬರೆದಿದ್ದರು. ಈ ಪತ್ರದನ್ವಯ ಮಾ. 15 ರಂದು ಏಜೆನ್ಸಿ ನೌಕರನನ್ನು ವಜಾ ಮಾಡಿರುವುದಾಗಿ ಅಧಿಕಾರಿಗೆ ಪತ್ರ ರವಾನಿಸಿದೆ.

ಆದರೂ ಈತ ಕಚೇರಿಗೆ ಬಂದು ಕಚೇರಿಯ ಕುರ್ಚಿಯಲ್ಲೇ ಕುಳಿತಿರುತ್ತಾನೆ. ಮೇ 28 ರಂದು ಸಹಾಯಕ ನಿರ್ದೇಶಕರಿಗೆ ಧಮ್ಕಿ ಹಾಕಿ ಕೆಲವು ಸಂಘಟನೆಗಳ ಸಹಯೋಗದೊಂದಿಗೆ ಪ್ರತಿಭಟನೆ ನಡೆಸಿ ಬೈದಿದ್ದಾನೆ. ಅಲ್ಲದೆ ಈತ ಕೆಲಸಕ್ಕೆ ಸೇರಿದ ದಿನದಿಂದ ಒಂದಲ್ಲ ಒಂದು ಕಿರುಕುಳವನ್ನು ಇಲ್ಲಿನ ನೌಕರರಿಗೆ ನೀಡುತ್ತಾ ಬಂದಿದ್ದು ಕೂಡಲೇ ಈತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ನಂತರ ಮನವಿ ಪತ್ರವನ್ನು ಉಪ ನಿರ್ದೇಶಕರಿಗೆ ನೀಡಲಾಯಿತು.

ಡಿ.ಡಿ. ಮಾತಿಗೂ ಕ್ಯಾರೆ ಎನ್ನದ ಗುರುಸ್ವಾಮಿ: ಪ್ರತಿಭಟನಾ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ್ ಭೇಟಿ ನೀಡಿ ಮನವಿ ಸ್ವೀಕರಿಸಿ ನಂತರ ಕಚೇರಿಗೆ ತೆರಳಿ ಈತನನ್ನು ಕೆಲಸದಿಂದ ನಿನ್ನನ್ನು ವಜಾ ಮಾಡಲಾಗಿದೆ. ನೀನು ಬರುವ ಅವಶ್ಯಕತೆ ಇಲ್ಲ ಎಂದು ಈಗ ನೀನು ಖುರ್ಚಿ ಖಾಲಿ ಮಾಡು ಎಂದು ಹೇಳಿದರೂ ಈತ ವಾಪಸ್ಸಾಗಲಿಲ್ಲ. ನಂತರ ಈತನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸಹಾಯಕ ನಿರ್ದೇಶಕ ರಾಜೇಶ್ ಅವರಿಗೆ ಉಪನಿರ್ದೇಶಕರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ರಾಜೇಶ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಏಕಾಂಗಿ ಪ್ರತಿಭಟನೆ: ಈ ಘಟನೆ ನಡೆದ ಬೆನ್ನಲ್ಲೇ ಗುರುಸ್ವಾಮಿ ಕಚೇರಿಯ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾನೆ. ನಾನು ಯಾವುದೇ ತಪ್ಪು ಮಾಡಿಲ್ಲ, ಕೆಲಸದಿಂದ ವಜಾ ಮಾಡಲು ಕಾರಣವಿಲ್ಲದಿದ್ದರೂ ನನ್ನ ಬಗ್ಗೆ ಆರೋಪಗಳನ್ನು ಮಾಡಲಾಗಿದೆ. ಅಲ್ಲದೆ ನನಗೆ ಕೆಲಸದಿಂದ ವಜಾ ಮಾಡಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ನಾನು ಕಚೇರಿಗೆ ಬರುತ್ತಿದ್ದೇನೆ ಎಂದು ಏಕಾಂಗಿಯಾಗಿ ಕೆಲಕಾಲ ಪ್ರತಿಭಟನೆ ನಡೆಸಿದ.
ದಸಂಸ ಜಿಲ್ಲಾ ಸಂಚಾಲಕ ಸಿ.ರಾಜಣ್ಣ, ತಾಲೂಕು ಸಂಚಾಲಕ ಚಂದ್ರಶೇಖರ್, ಎಚ್.ಎಂ.ಶಂಕರಮೂರ್ತಿ, ಕಂದಹಳ್ಳಿ ನಾರಾಯಣ, ದುಗ್ಗಹಟ್ಟಿ ಮಾದೇಶ್, ವರದರಾಜು, ಗೌಡಹಳ್ಳಿ ರಾಜೇಶ್, ಮಲ್ಲರಾಜು, ಅನಿಲ್ ಸೇರಿದಂತೆ ಅನೇಕರು ಇದ್ದರು.

ಸಮಾಜ ಕಲ್ಯಾಣ ಇಲಾಖೆ ಗುತ್ತಿಗೆ ನೌಕರ ಗುರುಸ್ವಾಮಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಕಚೇರಿ ಮುಂಭಾಗ ದಲಿತ ಸಂಘರ್ಷ ಸಮಿತಿಯ ಸದಸ್ಯರು ಯಳಂದೂರಿನಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಇಲಾಖೆಯ ಡಿ.ಡಿ. ಹಾಗೂ ಸಹಾಯಕ ನಿರ್ದೇಶಕರು ಭೇಟಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net