ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಒತ್ತಾಯಿಸಿ ಪ್ರತಿಭಟನೆ

ABVP
Published on

ಕುಮಟಾ: ಉಡುಪಿ ಕಾಲೇಜಿನ ಶೌಚಗೃಹದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣ ಅತ್ಯಂತ ಹೇಯ ಮತ್ತು ಖಂಡನೀಯ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಎಬಿವಿಪಿ ಕುಮಟಾ ಘಟಕದ ನೇತೃತ್ವದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಉಡುಪಿಯ ಕಾಲೇಜಿನಲ್ಲಿ ಹಿಂದು ವಿದ್ಯಾರ್ಥಿನಿಯರು ಶೌಚಕ್ಕೆ ಹೋದಾಗ ಅನ್ಯ ಕೋಮಿನ ವಿದ್ಯಾರ್ಥಿನಿಯರು ವಿಡಿಯೋ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಎಬಿವಿಪಿ ಇತರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆಯ ಹಿಂದೆ ಜಿಹಾದಿಗಳ ಕೈವಾಡ, ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ಕೂಪಕ್ಕೆ ತಳ್ಳುವ ಷಡ್ಯಂತ್ರ ಇರಬಹುದು. ಕೇರಳ ಸ್ಟೋರಿಯಂತೆ ಘಟನೆಗಳು ಉಡುಪಿಯಲ್ಲಿ ನಡೆಯುತ್ತಿರುವ ಸಂಶಯ ಬಲಗೊಂಡಿದ್ದರಿಂದ ಪಾಲಕರು ವಿದ್ಯಾರ್ಥಿನಿಯರನ್ನು ವಿದ್ಯಾಭ್ಯಾಸಕ್ಕೆ ಕಳಿಸಲು ಹಿಂಜರಿಯುವಂತಾಗಿದೆ. ಹೀಗಾಗಿ ಪೊಲೀಸರು ಸಮಗ್ರವಾಗಿ ತನಿಖೆ ನಡೆಸಿ, ಸರ್ಕಾರವು ಯಾವುದೇ ಹಸ್ತಕ್ಷೇಪ ನಡೆಸದೇ ಸಂಪೂರ್ಣ ಸತ್ಯಾಸತ್ಯತೆ ಹೊರಬರುವಂತೆ ಮಾಡಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಹಾಗೂ ಪುನಃ ಇಂತಹ ಘಟನೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿಯನ್ನು ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್ 2 ತಹಸೀಲ್ದಾರ್ ಅಶೋಕ ಭಟ್ ಸ್ವೀಕರಿಸಿದರು. ಎಬಿವಿಪಿ ತಾಲೂಕು ಸಂಚಾಲಕ ನಿಶಾಂತ ದೇಶಪಾಂಡೆ, ಕಾರ್ಯದರ್ಶಿ ಕೆ. ಎಸ್. ನಂದೀಶ ಹಾಗೂ ವಿದ್ಯಾರ್ಥಿಗಳಿದ್ದರು. ಪಿಎಸ್‌ಐ ನವೀನ ನಾಯ್ಕ ಹಾಗೂ ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net