

ಕೊಳ್ಳೇಗಾಲ: ತಾಲೂಕಿನ ಸಿಂಗನಲ್ಲೂರು ಗ್ರಾಮದ ಜನರಲ್ ಸೈಟ್‌ಗೆ ಮೂಲ ಸೌಕರ್ಯ ಇಲ್ಲದಿರುವುದನ್ನು ಖಂಡಿಸಿ ಮಂಗಳವಾರ ಬಡಾವಣೆಯ ಮಹಿಳೆಯರು ಗ್ರಾ.ಪಂ. ಮುಂದೆ ಧರಣಿ ಕುಳಿತು ಅಸಮಾಧಾನ ಹೊರಹಾಕಿದ್ದಾರೆ.
ಜನರಲ್ ಸೈಟ್‌ನಲ್ಲಿ ವಾಸವಿರುವ 15ಕ್ಕೂ ಹೆಚ್ಚು ಮಹಿಳೆಯರು ಸಿಂಗನಲ್ಲೂರು ಗ್ರಾ.ಪಂ. ಕಚೇರಿ ಮುಂದೆ ಕುಳಿತು ಬಡಾವಣೆಗೆ ಚರಂಡಿ, ಸುಸಜ್ಜಿತ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿದರು.
ಬಳಿಕ ಪಂಚಾಯಿತಿ ಪಿಡಿಒ ರೂಪಾ ಅವರಿಗೆ ಮನವಿ ನೀಡಿದ್ದು. ಸರ್ಕಾರದಿಂದ 1972ರಲ್ಲಿ ಗ್ರಾಮದ ಜನರಲ್ ಸೈಟ್ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. 40 ವರ್ಷದಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಜನಾಂಗದವರು ಇಲ್ಲಿ ವಾಸವಿದ್ದಾರೆ. ಈ ಬಡಾವಣೆಯಲ್ಲಿ ಬೀದಿ ದೀಪ, ಕುಡಿಯುವ ನೀರಿನ್ನು ಬಿಟ್ಟರೆ, ಚರಂಡಿ ಹಾಗೂ ಸುಸಜ್ಜಿತ ರಸ್ತೆ ವ್ಯವಸ್ಥೆ ಇಲ್ಲ. ಇದರಿಂದ ನಿವಾಸಿಗಳಿಗೆ ಬಹಳ ತೊಂದರೆಯಾಗಿದೆ. ಮೂಲಸೌಕರ್ಯ ಒದಗಿಸುವಂತೆ ಈಗಾಗಲೇ ಪಂಚಾಯಿತಿ ಆಡಳಿತ ವರ್ಗ ಹಾಗೂ ಅಭಿವೃದ್ಧಿ ಅಧಿಕಾರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜನರು ಬಡಾವಣೆಯಲ್ಲಿ ಸಂಚರಿಸುವುದಕ್ಕೆ ತೀವ್ರ ಸಮಸ್ಯೆ ಆಗಿದೆ. ಆದ್ದರಿಂದ ಬಡಾವಣೆಗೆ ರಸ್ತೆ, ಚರಂಡಿ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು. ನಂತರ, ಮಹಿಳೆಯರು ಪಂಚಾಯಿತಿಯಿಂದ ಹಿಂದಿರುಗಿದರು.