ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಪ್ರತಿಭಟನೆ

ಎಚ್.ಡಿ.ಕೋಟೆ ಪಟ್ಟಣದ ಪುರಸಭಾ ಕಚೇರಿ ಮುಂಭಾಗ ಎಂಟನೇ ವಾರ್ಡ್ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಎಚ್.ಡಿ.ಕೋಟೆ ಪಟ್ಟಣದ ಪುರಸಭಾ ಕಚೇರಿ ಮುಂಭಾಗ ಎಂಟನೇ ವಾರ್ಡ್ ನಿವಾಸಿಗಳು ಪ್ರತಿಭಟನೆ ನಡೆಸಿದರು.
Published on

ಎಚ್.ಡಿ.ಕೋಟೆ: ಹಲವು ತಿಂಗಳಿಂದ ಕುಡಿಯುವ ನೀರಿಗೆ ತೊಂದರೆ ಅನುಭವಿಸುತ್ತಿದ್ದರೂ ಪುರಸಭೆ ಯಾವುದೇ ಕ್ರಮ ವಹಿಸದೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ಪಟ್ಟಣದ ಎಂಟನೇ ವಾರ್ಡ್ ನಿವಾಸಿಗಳು  ಪುರಸಭಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪುರಸಭಾ ಕಚೇರಿ ಅಡ್ಡಲಾಗಿ ಕುಳಿತ ಪ್ರತಿಭಟನಾಕಾರರು, ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ. ನೀರು ಸರಬರಾಜು ಮಾಡುವಂತೆ ನೀರು ಗಂಟಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ವಾರ್ಡ್ ಸದಸ್ಯೆ ನಾಗಮ್ಮ ಒಂದು ದಿನವೂ ನಿವಾಸಿಗಳ ಸಮಸ್ಯೆ ಆಲಿಸಿಲ್ಲ. ಹಾಗಾಗಿ ನಮಗೆ ನೀರು ಒದಗಿಸುವವರೆಗೂ ಕಚೇರಿ ಬಿಟ್ಟು ಹೋಗುವುದಿಲ್ಲ ಎಂದು ನಿವಾಸಿಗಳು ಪಟ್ಟು ಹಿಡಿದು ಕುಳಿತರು.

ಪ್ರತಿಭಟನಾಕಾರರು ಕಚೇರಿಗೆ ಅಡ್ಡವಾಗಿ ಕುಳಿತಿರುವುದನ್ನು ಕಂಡು ವಿಚಲಿತರಾದ ಮುಖ್ಯಾಧಿಕಾರಿ ಪಿ.ಸುರೇಶ್, ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಇದು ಸಾಧ್ಯವಾಗಲಿಲ್ಲ. ಸ್ಥಳಕ್ಕೆ ವಾರ್ಡ್‌ನ ಸದಸ್ಯರು ಬಂದು ಸಮಸ್ಯೆ ಆಲಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಪಟ್ಟು ಹಿಡಿದರು. ಆದರೆ ಸದಸ್ಯೆ ಮಾತ್ರ ಬರಲಿಲ್ಲ.

ನಂತರ ಅಧ್ಯಕ್ಷೆ ಶಿವಮ್ಮ ಚಾಕಹಳ್ಳಿ ಕೃಷ್ಣ, ಉಪಾಧ್ಯಕ್ಷ ಆಸಿಫ್ ಇಕ್ಬಾಲ್, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಧುಕುಮಾರ್ ಸ್ಥಳಕ್ಕಾಗಮಿಸಿ, ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಒದಗಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಪ್ರತಿಭಟನೆಯಲ್ಲಿ ಅಂಗಡಿ ರವಿ, ವೀರೇಂದ್ರ, ಸೋಮಣ್ಣ ಚಾರಿ, ಚಿಕ್ಕನಾಯಕ, ಹಾಲಮ್ಮ, ತಿಮ್ಮಮ್ಮ, ಮುದ್ದಮ್ಮ, ರಾಮು, ನವೀನ, ಬಿಲ್ಲನಾಯಕ, ಕೃಷ್ಣನಾಯಕ, ನಿಂಗನಾಯಕ, ನಾಗನಾಯಕ, ರಾಜನಾಯಕ, ನಾಗೇಶ್ ನಾಯ್ಕ, ಮಂಜು, ನಿಂಗಣ್ಣ, ರಾಮ ಇದ್ದರು.

ಕಬಿನಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಲೈನ್ ಅಗ್ನಿಶಾಮಕ ಕಚೇರಿ ಬಳಿ ದುರಸ್ತಿಗೊಂಡಿರುವುದರಿಂದ ಕುಡಿಯುವ ನೀರಿನಲ್ಲಿ ವ್ಯತ್ಯಯ ಉಂಟಾಗಿದೆ. ಶೀಘ್ರ ಪೈಪ್ ದುರಸ್ತಿ ಮಾಡಿಸಿ ಪಟ್ಟಣದ ಎಲ್ಲ ವಾರ್ಡ್‌ಗೂ ಶುದ್ಧ ಕುಡಿಯುವ ನೀರು ನೀಡಲು ಕ್ರಮ ವಹಿಸಲಾಗುವುದು.

ಪಿ.ಸುರೇಶ್ ಪುರಸಭಾ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net