

ಮಂಡ್ಯ: ತಾಲೂಕಿನ ಬೂದನೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಕಳೆದ 4 ವರ್ಷದಿಂದ ಅಕ್ರಮ, ಅವ್ಯವಹಾರದಲ್ಲಿ ತೊಡಗಿರುವುದರ ವಿರುದ್ದ ಸಮಗ್ರ ತನಿಖೆ ನಡೆಸುವಂತೆ ಹಾಗೂ ಆಶ್ರಯ ಬಡಾವಣೆಗೆ ಶಾಸಕ ರವಿಕುಮಾರ್ ಗಣಿಗ ಹೆಸರಿಡುವಂತೆ ಆಗ್ರಹಿಸಿ ಸ್ವಂತಮನೆ ನಮ್ಮಹಕ್ಕು ಹೋರಾಟಗಾರರು ಸೋಮವಾರ ನಗರದಲ್ಲಿ ಅಹೋರಾತ್ರಿ ಧರಣಿ ಅರಂಭಿಸಿದರು.
ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸುತ್ತಿರುವ ಪ್ರತಿಭಟನಾಕಾರರು, ತಮ್ಮ ರಕ್ತ ತೆಗೆದು ಬ್ಯಾನರ್‌ಗೆ ಅರ್ಪಿಸಿ ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕ ಸಹಭಾಗಿತ್ವ, ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಬೂದನೂರು ಗ್ರಾಮ ಪಂಚಾಯತಿ ವಿಫಲವಾಗಿದೆ. ಗ್ರಾಮದಲ್ಲಿ ನಿರ್ಮಾಣವಾಗಿರುವ ಆಶ್ರಯ ಬಡಾವಣೆಗೆ ಕ್ಷೇತ್ರದ ಶಾಸಕ ರವಿಕುಮಾರ್ ಗಣಿಗ ಅವರ ಹೆಸರು ನಾಮಕರಣ ಮಾಡಲು ಫಲಾನುಭವಿಗಳ ಪರವಾಗಿ ಮನವಿ ನೀಡಿದರೆ, ಪ್ರಭಾವ ಮತ್ತು ಅಮಿಷಗಾಗಿ ಸದಸ್ಯರು ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರ ಹೆಸರನ್ನು ನಾಮಕರಣ ಮಾಡಿ ಬಳಿಕ ಮತ್ತೆ ಪರಿಷ್ಕರಿಸುವ ಭರವಸೆ ನೀಡಿ 3 ತಿಂಗಳಿನಿಂದ ಸಾಮಾನ್ಯ ಸಭೆ ಕರೆಯದೇ ಕರ್ತವ್ಯಲೋಪ ಎಸಗಿದ್ದಾರೆಂದು ಆರೋಪಿಸಿದರು.
ಗ್ರಾಪಂ ಅಧ್ಯಕ್ಷೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಕೆಲ ಭ್ರಷ್ಟ ಸದಸ್ಯರು ಸೇರಿ ಬೂದನೂರು ಸರ್ವೇ ನಂ.382, 382/7 ರ ಭೂಮಿಯ ಆರ್‌ಟಿಸಿ ಇಂಡೀಕರಣವಾಗಿಲ್ಲದಿದ್ದರೂ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನಕ್ಕೆ ಖಾಸಗಿ ವ್ಯಕ್ತಿಯ ನಿವೇಶನದ ಸಂಖ್ಯೆ ಬಳಸಿ ಕ್ರಮ ಸಂಖ್ಯೆಯ ಇ ಸ್ವತ್ತು ನಂ.152100405200220045 ತೆಗೆದು ಅಕ್ರಮ ಹಾಗೂ ಭ್ರಷ್ಟಾಚಾರ ಎಸಗಿರುವುದು ಕಂಡು ಬಂದಿದೆ. ತಾವು ಈ ಮೇಲಿನ ಸಂಖ್ಯೆಯ ಇ ಸ್ವತ್ತು ಸಂಬಂಧ ನಡೆದಿರುವ ವ್ಯವಹಾರ ಪರಿಶೀಲಿಸಬೇಕು. ಗ್ರಾಪಂನಿಂದ ಹುಕ್ಕಾಬಾರ್ ಅಕ್ರಮವಾಗಿ ಅನುಮತಿ ನೀಡಿದೆ. ಈ ವಿಚಾರದಲ್ಲಿ ಭೂಮಾಲೀಕರ ಸಂಬಂಧಿಯೇ ಸದಸ್ಯನಾಗಿ ಪ್ರಭಾವ ಬೀರಿರುವುದು ಸ್ಪಷ್ಟವಾಗಿದೆ. ಇವೆಲ್ಲ ಅಕ್ರಮದ ಅರಿವಿದ್ದರೂ ಗ್ರಾಪಂ ಪಿಡಿಒ ಅವರು ಯಾವುದೇ ಆಕ್ಷೇಪ ದಾಖಲಿಸಿಲ್ಲ ಎಂದು ದೂರಿದರು.
ಘನತ್ಯಾಜ್ಯ ಘಟಕ ನಿರ್ಮಿಸಲು ಅಗತ್ಯ ಭೂಮಿ ಮಂಜೂರಾಗಿ 2 ವರ್ಷ ಕಳೆದರೂ ಕ್ರಮ ವಹಿಸಲು ಮೀನಾಮೇಷ ಎಣಿಸಲಾಗುತ್ತಿದೆ. ಅಲ್ಲದೆ ಬೂದು ಬಣ್ಣ ನೀರು ನಿರ್ವಹಣೆಗೆ ಚರಂಡಿ ನಿರ್ಮಿಸಲು ಮಂಜೂರಾಗಿರುವ ಅನುದಾನದಲ್ಲಿ ಸರ್ಕಾರ ನಿರ್ದೇಶನ ಮಾಡಿರುವಂತೆ ಕಾಮಗಾರಿ ನಡೆಸದೆ ನಿಯಮ ಉಲ್ಲಘಿಸಿ ಹಣ ದುರುಪಯೋಗ ಮಾಡಲಾಗಿದೆ. ಇದರಿಂದ 10 ಲಕ್ಷ ರೂ ದುರ್ಬಳಕೆಯಾಗಿದೆ ಸೇರಿದಂತೆ 17 ಆರೋಪಗಳಿನ್ನಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ. ಆದ್ದರಿಂದ ಅವ್ಯವಹಾರಗಳ ಕುರಿತು ಸರ್ವ ಸದಸ್ಯರನ್ನು ಪ್ರತ್ಯೇಕ ವಿಚಾರಣೆಗೆ ಒಳಪಡಿಸಿ ಕ್ರಮ ವಹಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಹೋರಾಟ ಸಮಿತಿ ಬಿ.ಕೆ.ಸತೀಶ್, ಸವಿತಾ, ವಿಜಯ, ಮಂಗಳಾ, ಶಿವರಾಜು, ಕಾರ್ತಿಕ್ ಇತರರಿದ್ದರು.