

ಮಂಡ್ಯ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿರುವ ಕೂಲಿಕಾರರಿಗೆ ಬಾಕಿ ಕೂಲಿ ಪಾವತಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಸರ್ ಎಂ.ವಿ ಪ್ರತಿಮೆಯಿಂದ ಮೆರವಣಿಗೆ ಹೊರಟು ತಾಲೂಕು ಪಂಚಾಯಿತಿ ಕಚೇರಿಗೆ ತೆರಳಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಇಂಡುವಾಳು, ಬೇವಿನಹಳ್ಳಿ, ಶಿವಳ್ಳಿ, ಹಳೇಬೂದನೂರು, ಮಂಗಲ, ಹೊಳಲು, ಚೀರನಹಳ್ಳಿ, ಬಸರಾಳು, ಸೂನಗಹಳ್ಳಿ ಗ್ರಾ.ಪಂಗಳಲ್ಲಿ ಕೆಲಸ ಮಾಡಿರುವ ಕೂಲಿಕಾರರಿಗೆ 100 ದಿನ ಕೆಲಸ ನೀಡಬೇಕು. ಕಳೆದ ಮೂರು ವರ್ಷದಿಂದ ಕೆಲಸ ನಿರ್ವಹಿಸಿರುವ ಕಾಯಕಬಂಧುಗಳಿಗೆ ಪ್ರೋತ್ಸಾಹ ಧನವನ್ನು ಅವರ ಖಾತೆಗೆ ಜಮೆ ಮಾಡಬೇಕು. ಕೂಲಿಕಾರರು ಕೆಲಸ ಮಾಡುವ ಸ್ಥಳಗಳಲ್ಲಿ ಅನಾಹುತ ಸಂಭವಿಸದಂತೆ ಕೈ ಗವಸು, ಕಾಲಿಗೆ ಶೂಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಎಚ್.ಮಲ್ಲಿಗೆರೆ ಗ್ರಾ.ಪಂನ ಸಂಪಳ್ಳಿ ವ್ಯಾಪ್ತಿ ಸರ್ವೆ ನಂ.129 ರಲ್ಲಿ ವಾಸವಿರುವ 40 ಕುಟುಂಬಕ್ಕೆ ಹಕ್ಕು ಪತ್ರ ನೀಡಬೇಕು. ಅದೇ ಸರ್ವೆ ನಂ.ನಲ್ಲಿ 2 ಎಕರೆ 20 ಗುಂಟೆ ನೀವೇಶನಕ್ಕೆ ಮಂಜೂರು ಮಾಡಿ ಹಕ್ಕು ಪತ್ರ ನೀಡಿದ್ದರೂ ನಿವೇಶನ ನೀಡಿಲ್ಲ. ಅವರಿಗೆ ತಕ್ಷಣ ನಿವೇಶನ ಹಂಚಿಕೆ ಮಾಡಿ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಬೇಕು. ಎಚ್.ಕೋಡಿಹಳ್ಳಿ ಸರ್ವೆ ನಂ.227, 229 ಸಂತೆಕಸಲಗೆರೆ ಸರ್ವೆ ನಂ. 569 ಕುಟುಂಬಗಳಿಗೆ ಹಕ್ಕು ಪತ್ರ ನೀಡಬೇಕು. ಕಬ್ಬನಹಳ್ಳಿ ಗ್ರಾಮದ ಕೂಲಿಕಾರರಿಗೆ ನಿವೇಶನ ಗುರುತಿಸಿ ಹಂಚಿಕೆ ಮಾಡಬೇಕು. ಇಂಡುವಾಳು ಗ್ರಾಮ ಪಂಚಾಯಿತಿ ಸರ್ವೆ ನಂ. 89ರಲ್ಲಿ 68 ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದು, ಮನೆ ಮಂಜೂರು ಮಾಡಬೇಕು. ಹಳೇಬೂದನೂರು ಸರ್ವೆ ನಂ 190, 142, 144, 84, 85ರಲ್ಲಿ ಮಂಜೂರಾಗಿರುವ ಭೂಮಿಯಲ್ಲಿ ಒತ್ತುವರಿದಾರರ ವ್ಯಾಜ್ಯ ವಜಾಗೊಳಿಸಬೇಕು ಎಂದು ಆಗ್ರಹಿಸಿದರು
ವಿವಿಧ ಗ್ರಾಮಗಳಿಗೆ ಸ್ಮಶಾನ ಜಾಗ ಮಂಜೂರು ಮಾಡಿಕೊಡಬೇಕು. ಒತ್ತುವರಿಯಾಗಿರುವ ಸ್ಮಶಾನಗಳನ್ನು ತೆರವುಗೊಳಿಸಿ ಅಭಿವೃದ್ಧಿಪಡಿಸಬೇಕು. ಮೊಳೆಕೊಪ್ಪಲು, ಹುಲ್ಕೆರೆ ಸೇರಿ ಇತರೆಡೆ ವಾಸಿಸುತ್ತಿರುವ ಬುಡಕಟ್ಟು ಮತ್ತು ಸಿಳ್ಳೆಕ್ಯಾತ ಜನಾಂಗಕ್ಕೆ ನಿವೇಶನ ಒದಗಿಸಿ ವಸತಿ ಸಹಾಯಧನ ನೀಡಬೇಕು. ಉಪಕಸುಬುಗಳನ್ನು ಮಾಡಲು ಸಾಲ ಸೌಲಭ್ಯ ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸಿ ಸಿ.ಸಿ. ಚರಂಡಿ ಮತ್ತು ಸಿ.ಸಿ. ರಸ್ತೆಗಳನ್ನು ನಿರ್ಮಾಣ ಮಾಡಬೇಕು. ಉಪಕಸುಬು ಮಾಡಲು ಸಾಲ ಕೇಳಿ ಅರ್ಜಿ ಸಲ್ಲಿಸಿರುವ ಬಡವರಿಗೆ ಆರ್.ಬಿ.ಐ. ನಿರ್ದೇಶನದಂತೆ 2 ಲಕ್ಷ ರೂವರೆಗೆ ಬಡ್ಡಿ ರಹಿತ ಸಾಲ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಉಪಾಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಅಮಾಸಯ್ಯ, ಆರ್.ರಾಜು, ಎಂ.ಎಸ್.ಸಂತೋಷ್, ಅಬ್ದುಲ್ಲಾ, ಎಚ್.ಎಸ್.ಮಂಜುಳಾ, ಟಿ.ಪಿ.ಅರುಣ್‌ಕುಮಾರ್ ಇತರರಿದ್ದರು.