ಪಿಎಫ್, ಇಎಸ್‌ಐ ಹಣ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

oppo_2
ಮದ್ದೂರು ತಾಲೂಕಿನ ಸೋಮನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಸರವಿ ಗಾರ್ಮೆಂಟ್ಸ್ ಕಾರ್ಖಾನೆಯ ಆಡಳಿತ ಮಂಡಳಿಯವರು ಕಾರ್ಮಿಕರಿಗೆ ಪಿಎಫ್ ಮತ್ತು ಇಎಸ್‌ಐ ಹಣವನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಸೋಮನಹಳ್ಳಿಯಲ್ಲಿ ಪ್ರತಿಭಟನೆ ಮಾಡಲಾಯಿತು. ಎಂ.ಪುಟ್ಟಮಾದು, ಬಿ.ಎಂ.ಶಿವಮಲ್ಲಯ್ಯ, ಬಿ.ಹನುಮೇಶ್, ಎನ್.ಸುರೇಂದ್ರ, ಪಿ.ಪಿ.ಅರುಣ್‌ಕುಮಾರ್ ಇದ್ದರು.
Published on

ಮದ್ದೂರು: ತಾಲೂಕಿನ ಸೋಮನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಸರವಿ ಗಾರ್ಮೆಂಟ್ಸ್ ಇಂಡಸ್ಟ್ರೀಸ್ ಕಾರ್ಖಾನೆಯ ಆಡಳಿತ ಮಂಡಳಿಯವರು ಕಾರ್ಮಿಕರಿಗೆ ಪಿಎಫ್ ಮತ್ತು ಇಎಸ್‌ಐ ಹಣವನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಸೋಮನಹಳ್ಳಿಯಲ್ಲಿ ಪ್ರತಿಭಟನೆ ಮಾಡಲಾಯಿತು.

ಕಾರ್ಮಿಕರಿಗೆ ಪಿ.ಎಫ್. ಮತ್ತು ಇಎಸ್‌ಐ ಹಣವನ್ನು ನೀಡದ ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ಕಾರ್ಮಿಕರು ಘೋಷಣೆಗಳನ್ನು ಕೂಗಿ ಗುರುವಾರ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿ, ಸರವಿ ಗಾರ್ಮೆಂಟ್ಸ್ ಇಂಡಸ್ಟ್ರೀಸ್‌ನವರು ರಾಮನಗರದಲ್ಲಿ ಕಾರ್ಖಾನೆ ಆರಂಭಿಸಿ ಅಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಹಿಳಾ ಮತ್ತು ಪುರುಷ ಕಾರ್ಮಿಕರಿಗೆ ಅಂದಾಜು 80 ಲಕ್ಷ ರೂ.ಗಳ ಪಿಎಫ್ ಮತ್ತು ಇಎಸ್‌ಐ ಹಣವನ್ನು ನೀಡದೆ ಕಾರ್ಖಾನೆ ಮುಚ್ಚಿ ಕಾರ್ಮಿಕರಿಗೆ ವಂಚನೆ ಮಾಡಿ ಈದೀಗ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹೊಸದಾಗಿ ಯೂನಿಟ್ ಆರಂಭಿಸಿದ್ದಾರೆ ಎಂದು ಆರೋಪಿಸಿದರು.

ರಾಮನಗರದಲ್ಲಿ ಕಾರ್ಖಾನೆ ಆರಂಭಿಸಿದಾಗ ಅಲ್ಲಿ ಕರ್ತವ್ಯ ನಿರ್ವಹಿಸಿದ್ದ ಹಲವಾರು ಮಹಿಳಾ ಮತ್ತು ಪುರಷ ಕಾರ್ಮಿಕರಿಗೆ ಪಿಎಫ್ ಮತ್ತು ಇಎಸ್‌ಐ ಹಣ, ವೇತನ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡದೆ ಅಲ್ಲಿ ಕಾರ್ಖಾನೆ ಮುಚ್ಚಿ ನೌಕರರಿಗೆ ಅನ್ಯಾಯ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೀಘ್ರವಾಗಿ ಕಾರ್ಮೀಕರ ಬೇಡಿಕೆಗಳನ್ನು ಈಡೇರಿಸದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಕಾರ್ಖಾನೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕಾರ್ಖಾನೆಯ ಅಧಿಕಾರಿಗಳಾದ ಪ್ರದೀಪ್ ಹಾಗೂ ಪ್ರತಾಪ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪಿಎಫ್ ಮತ್ತು ಇಎಸ್‌ಐ ಹಣವನ್ನು ಸ್ವಲ್ಪ ಪ್ರಮಾಣದಲ್ಲಿ ನೀಡಲಾಗುವುದು. ಉಳಿಕೆ ಹಣವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು 3 ತಿಂಗಳೊಳಗಾಗಿ ನೀಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಉಪಾಧ್ಯಕ್ಷ ಎನ್.ಸುರೇಂದ್ರ, ತಾಲೂಕು ಕಾರ್ಯದರ್ಶಿ ಪಿ.ಪಿ.ಅರುಣ್‌ಕುಮಾರ್, ಮುಖಂಡರಾದ ಎಂ.ವಿ. ಚೈತ್ರಾ, ಬಿ.ಎಸ್.ಅನಿತಾ, ಕೆ.ರೂಪಾ, ಎಸ್.ಬಸವರಾಜು, ಬಿ.ಬಿ.ಅನಿಲ್‌ಕುಮಾರ್, ರಾಮಕೃಷ್ಣ ಮಹಾದೇವಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net