ಕಾವೇರಿ ನೀರು ಬಿಡದಂತೆ ಆಗ್ರಹಿಸಿ ಪ್ರತಿಭಟನೆ

mysore Cauvery protest
Published on

ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆದೇಶಿಸಿರುವ ಕಾವೇರಿ ನೀರು ನಿರ್ವಹಣಾ ಸಮಿತಿ ನಿರ್ಧಾರವನ್ನು ಖಂಡಿಸಿ ಭಾವಸಾರ ಕ್ಷತ್ರಿಯ ಸಮಾಜದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.


ಲಷ್ಕರ್ ಮೊಹಲ್ಲಾದ ಕಬೀರ್ ರಸ್ತೆಯಲ್ಲಿರುವ ಪಾಂಡುರಂಗಸ್ವಾಮಿ ದೇವಾಲಯದ ಮುಂಭಾಗದಿಂದ ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರು, ಯುವಕರು, ಮಹಿಳೆಯಯರು ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಅಶೋಕ ರಸ್ತೆಯ ಮೂಲಕ ಮಹಾತ್ಮಗಾಂಧಿ ವೃತ್ತ ತಲುಪಿದರು.

ಬಳಿಕ ಧರಣಿ ನಡೆಸಿ, ಕಾವೇರಿ ಜಲ ವಿವಾದ ಮುಂದಿಟ್ಟುಕೊಂಡು ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವ ತಮಿಳುನಾಡು ಸರ್ಕಾರ, ವಾಸ್ತವ ಸ್ಥಿತಿಗತಿ ಅವಲೋಕಿಸದೆ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸುತ್ತಿರುವ ಕಾವೇರಿ ನೀರು ನಿರ್ವಹಣಾ ಸಮಿತಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು


ಜನತೆಯ ತೆರಿಗೆ ಹಣದಲ್ಲಿ ಕನ್ನಂಬಾಡಿ ಕಟ್ಟೆ ಕಟ್ಟಲಾಗಿದೆ. ಮೊದಲು ರಾಜ್ಯಕ್ಕೆ ನೀರು ಬಳಸಿದ ನಂತರ ಉಳಿದ ನೀರನ್ನು ತಮಿಳುನಾಡಿಗೆ ಬಿಡಬೇಕು. ಆದರೆ, ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದೆ. 195 ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ. ಇಂತಹ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡಬೇಕೆಂದು ಆದೇಶಿಸಿರುವುದು ನ್ಯಾಯಸಮ್ಮತವಲ್ಲ ಎಂದು ಕಿಡಿಕಾರಿದರು.


ರಾಜ್ಯದ ಸಂಕಷ್ಟವನ್ನು ಪರಿಗಣನೆಗೆ ತೆಗೆದುಕೊಳ್ಳದೆ ನೀರು ಹರಿಸಬೇಕೆಂಬ ಆದೇಶ ಅವೈಜ್ಞಾನಿಕವಾಗಿದೆ. ನಮ್ಮ ರಾಜ್ಯದ ಜನತೆಗೆ ಕುಡಿಯಲು ಮತ್ತು ರೈತರ ಬೆಳೆಗಳಿಗೆ ನೀರಿಲ್ಲವಾದ್ದರಿಂದ ಯಾವುದೇ ಕಾರಣಕ್ಕೂ ನೀರು ಬಿಡಬಾರದು. ನ್ಯಾಯಾಲಯದಲ್ಲಿ ಉತ್ತಮ ವಕೀಲರನ್ನು ನೇಮಿಸಿ ಸಮರ್ಥವಾಗಿ ವಾದ ಮಂಡನೆ ಮಾಡಿ ವಸ್ತುಸ್ಥಿತಿಯನ್ನು ಅರ್ಥ ಮಾಡಿಸಬೇಕೆಂದು ಆಗ್ರಹಿಸಿದರು.


ಸಂಘದ ಅಧ್ಯಕ್ಷ ಆರ್.ವಿ.ಶಿವಾಜಿ ರಾವ್, ಕಾರ್ಯದರ್ಶಿ ರಾಕೇಶ್ ನಾಯಕ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net