

ಮೈಸೂರು: ನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಇಲ್ಲದೆ ಪಾಲಿಕೆ ದಿವಾಳಿಯಾಗಿದ್ದು, ಕೂಡಲೇ ಪಾಲಿಕೆಗೆ ಸರ್ಕಾರ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ನಗರ ಪಾಲಿಕೆ ಕಚೇರಿ ಎದುರು ನಗರ ಪಾಲಿಕೆ ಚುನಾವಣಾ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ಜನಪ್ರತಿನಿಧಿಗಳು ಇಲ್ಲದೆ ಪಾಲಿಕೆಯ ಆಡಳಿತ ಹಳಿ ತಪ್ಪಿದ್ದು, ಹಣ ಇಲ್ಲದೆ ಇದ್ದರೂ ಅಧಿಕಾರಿಗಳು ಕಾಮಗಾರಿಗಳನ್ನು ಕೈಗೊಂಡು ಪಾಲಿಕೆಯನ್ನು ದಿವಾಳಿ ಮಾಡಿದ್ದಾರೆ. ಜನಪ್ರತಿನಿಧಿಗಳು ಇಲ್ಲದೆ ಜನರ ಸಮಸ್ಯೆಗಳು ವಾರ್ಡ್ ವ್ಯಾಪ್ತಿಯಲ್ಲಿ ಬಗೆಹರಿಯುತ್ತಿಲ್ಲ. ಹಾಗಾಗಿ ಚುನಾವಣೆ ನಡೆಸಲು ಸರ್ಕಾರ ತುರ್ತಾಗಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಲಾಯಿತು.
ತೆರಿಗೆ ವಸೂಲಾತಿಯ ಕುರಿತು ನಗರ ಪಾಲಿಕೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸುತ್ತಿಲ್ಲ. ಕೋಟ್ಯಾಂತರ ರೂ.ತೆರಿಗೆ ವಸೂಲಾತಿಗೆ ಬಾಕಿ ಇದೆ. ಹೀಗಾದರೆ ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹೇಗೆ ಸಾಧ್ಯ? ಸರ್ಕಾರ ಗ್ರೇಟರ್ ಮೈಸೂರು ರಚನೆಯ ಕಡೆಗೆ ಒಲವು ತೋರುವ ಮೂಲಕ ಪಾಲಿಕೆ ಚುನಾವಣೆಯನ್ನು ಮುಂದೂಡುತ್ತಾ ಬಂದಿದೆ. ಸರ್ಕಾರ ಗ್ರೇಟರ್ ಮೈಸೂರು ರಚನೆ ಪ್ರಕ್ರಿಯೆಯನ್ನು ಕೈಬಿಟ್ಟು ತಕ್ಷಣ ಚುನಾವಣೆ ನಡೆಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಲಾಯಿತು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ನಂಜರಾಜೇ ಅರಸ್, ಅರವಿಂದ್ ಶರ್ಮ, ಶುಶ್ರುತ್ ಗೌಡ, ಸೋಸಲೆ ಸಿದ್ದರಾಜು, ನಾಲಾಬೀದಿ ರವಿ, ರಂಗಯ್ಯ, ವೀರೇಶ್ ನಂಜನಗೂಡು , ಧರ್ಮಶ್ರೀ, ಪುಟ್ಟನಂಜಯ್ಯ ದೇವನೂರು, ತಬ್ರೆಸ್ ಸೇಠ್, ನಾಗೇಂದ್ರ, ಸುರೇಶ್ ಬಾಬು ಹಾಗೂ ಇತರರು ಪಾಲ್ಗೊಂಡಿದ್ದರು.
----------------