

ಮೈಸೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ತುಂಡು ಗುತ್ತಿಗೆ ಕಾಮಗಾರಿ ನೀಡುವಲ್ಲಿ ನಡೆದಿರುವ ಅಕ್ರಮದ ತನಿಖೆ ನಡೆಸುವಂತೆ ಒತ್ತಾಯಿಸಿ ಕರ್ನಾಟಕ ವೀರ ಕೇಸರಿ ಪಡೆ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.
ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಸರ್ಕಾರಿ ನಿಯಮವನ್ನು ಗಾಳಿಗೆ ತೂರಿ ತಮಗಿಷ್ಟ ಬಂದ ಗುತ್ತಿಗೆದಾರರಿಗೆ ತುಂಡುಗುತ್ತಿಗೆ ನೀಡಿ ಅಕ್ರಮವೆಸಗಿದ್ದಾರೆ. ಸರ್ಕಾರಿ ನಿಯಮದಂತೆ ತುಂಡುಗುತ್ತಿಗೆ ಕಾಮಗಾರಿ ಕೋರಿ ಅರ್ಜಿ ಸಲ್ಲಿಸಿರುವ ಗುತ್ತಿಗೆದಾರರಿಗೆ ಜ್ಯೇಷ್ಠತೆಯನ್ವಯ ಕಾಮಗಾರಿ ನೀಡಬೇಕು. ಗುತ್ತಿಗೆದಾರರು ಅರ್ಜಿ ನೀಡಿರುವ ವಿವರವನ್ನು ಸ್ವೀಕೃತಿ ವಹಿ ಪುಸ್ತಕದಲ್ಲಿ ನಮೂದು ಮಾಡಬೇಕು. ಆದರೆ ಅಧಿಕಾರಿಗಳು ಅರ್ಜಿ ಸಲ್ಲಿಸದ ಗುತ್ತಿಗೆದಾರರಿಗೆ ಕಾಮಗಾರಿ ನೀಡಿ ಅರ್ಹರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಕ್ರಮದ ಕುರಿತು ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೆ.ಆರ್.ನಗರ ಉಪವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ತನ್ನ ಸಹೋದರನಿಗೆ ತುಂಡುಗುತ್ತಿಗೆ ಕಾಮಗಾರಿಯನ್ನು ನಿಯಮಬಾಹಿರವಾಗಿ ನೀಡಿದ್ದಾರೆ. ಈ ಸಂಬಂಧ ದೂರು ನೀಡಿ 9 ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮೇಲಧಿಕಾರಿಗಳು ಕ್ರಮ ಜರುಗಿಸಲು ಮೀನಮೇಷ ಎಣಿಸುತ್ತಿದ್ದಾರೆ. ಕೂಡಲೇ ಸರ್ಕಾರ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಅರ್ಹರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಮಧುವನ ಚಂದ್ರು, ಕಾರ್ಯದರ್ಶಿ ಮಹದೇವು, ಗೌರವ ಸಲಹೆಗಾರ ಆಲಗೂಡು ಬಸವರಾಜು, ಗುತ್ತಿಗೆದಾರರಾದ ಶಾಲಾಕ್ಷ, ದೇವರಾಜು, ಪ್ರವೀಣ್, ಮರಿಸ್ವಾಮಿ, ರತ್ನಮ್ಮ, ಕನಕಮ್ಮ ಇತರರು ಭಾಗವಹಿಸಿದ್ದರು.