

ಮೈಸೂರು: ಗೌರಿಶಂಕರ ನಗರ, ದತ್ತ ನಗರ ಹಾಗೂ ಸುತ್ತಮುತ್ತಲಿನ ಬಡಾವಣೆಯ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಪಂಚಗವಿಮಠ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಬುಧವಾರ ಪ್ರತಿಭಟನೆ ನಡೆಯಿತು.
ಗೌರಿಶಂಕರ ನಗರದ ಮುಖ್ಯರಸ್ತೆಯಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷೃ ಧೋರಣೆ ತಾಳಿದ್ದಾರೆ ಎಂದು ಆರೋಪಿಸಿದರು.
ನಮ್ಮ ಬಡಾವಣೆಯ ರಸ್ತೆ, ಒಳಚರಂಡಿ ಕೆಲಸಗಳು ಅವ್ಯವಸ್ಥೆಯ ಸ್ಥಿತಿಯಲ್ಲಿವೆ. ಮಳೆಗಾಲದಲ್ಲಿ ಅಲ್ಲದೆ ಸಾಮಾನ್ಯ ದಿನಗಳಲ್ಲಿಯೂ ಒಳಚರಂಡಿ ನೀರು ಸರಾಗವಾಗಿ ಹರಿಯದೇ ರಸ್ತೆ ಮೇಲೆ ನಿಲ್ಲುತ್ತದೆ. ಬಡಾವಣೆಯ ಎಲ್ಲ ರಸ್ತೆಗಳು ಹಾಳಾಗಿದ್ದು, ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಮಳೆಗಾಲದಲ್ಲಿ ಇಲ್ಲಿ ರಸ್ತೆಗಳಲ್ಲಿ ತಿರುಗಾಡಲು ಸಹ ಸಾಧ್ಯವಾಗುತ್ತಿಲ್ಲ. ವಾಹನ ಸವಾರರು ಬಿದ್ದು ಗಾಯಗೊಂಡಿರುವ ಉದಾರಣೆಗಳಿವೆ. ತೊಂದರೆಗಳ ಬಗ್ಗೆ ಎಷ್ಟೋ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಗಮನ ಹರಿಸುತ್ತಿಲ್ಲ ಎಂದು ದೂರಿದರು.
ಸಂಬಂಧಪಟ್ಟ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಮತ್ತು ಬಡಾವಣೆಯ ಕಾಮಗಾರಿ ಮಾಡಿರುವ ಗುತ್ತಿಗೆದಾರರ ವಿರುದ್ಧ ಪಾಲಿಕೆ ಆಯುಕ್ತರು ಸೂಕ್ತ ತನಿಖೆಗೆ ಆದೇಶಿಸಬೇಕು. ಆ ಮೂಲಕ ಇಲ್ಲಿ ಕಳಪೆ ಕಾಮಗಾರಿ ನಡೆಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪಾಲಿಕೆ ಕಚೇರಿ ಎದುರು ಧರಣಿ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ನಗರ ಪಾಲಿಕೆ ಮಾಜಿ ಸದಸ್ಯ ಪ್ರದೀಪ್, ಮುಖಂಡರಾದ ಎ.ಜೆ.ಸುರೇಶ್, ಎಲ್.ಮಹದೇವಪ್ಪ ಉಡಿಗಾಲ, ಎಂ.ಶಿವಮೂರ್ತಿ, ಸಿ.ರಾಜಶೇಖರಮೂರ್ತಿ, ಎಚ್.ಸಿ.ಗಂಗಾಧರಸ್ವಾಮಿ ಇತರರಿದ್ದರು.