

ಮಳವಳ್ಳಿ: ತಾಲೂಕಿನ ಗುಳಘಟ್ಟ ಗ್ರಾಮದಲ್ಲಿ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ನೆಲಮಾಕನಹಳ್ಳಿ ಗ್ರಾಮ ಪಂಚಾಯಿತಿ ಮುಂದೆ ಗುರುವಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು ಗುಳಘಟ್ಟ ಗ್ರಾಮಸ್ಥರೊಡಗೂಡಿ ಪ್ರತಿಭಟನೆ ನಡೆಸಿದರು.
ಸಂಘಟನೆಯ ರಾಜ್ಯಾಧ್ಯಕ್ಷೆ ದೇವಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷ ಕಳೆದಿವೆ. ಭಾರತ ಜಗತ್ತಿನಲ್ಲೇ ಅತ್ಯುತ್ತಮ ಸಂವಿಧಾನವನ್ನು ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಿಗೆ ಇನ್ನೂ ಸಮರ್ಪಕವಾಗಿ ಮೂಲ ಸೌಕರ್ಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ನೆಲಮಾಕನಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ಗುಳಘಟ್ಟ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. 15 ಮನೆಗಳ ಮಧ್ಯೆ ಒಂದು ಸಾರ್ವಜನಿಕ ನಲ್ಲಿಗಳನ್ನು ಹಾಕಿದ್ದು, ಇದೇ ನೀರನ್ನು ಜನರು ಉಪಯೋಗಿಸಬೇಕಿದೆ. ಗ್ರಾಮದಲ್ಲಿ ಮುಖ್ಯ ನೀರಿನ ಟ್ಯಾಂಕ್ ನಿರ್ಮಾಣಗೊಂಡು ಮೂರು ವರ್ಷಗಳು ಕಳೆದರೂ ಟ್ಯಾಂಕನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ. ಇದರಿಂದ ಗ್ರಾಮಸ್ಥರು ಮನೆ ಬಳಕೆಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. ಜಿಲ್ಲಾ ಪಂಚಾಯಿತಿಯಿಂದ ಸಮರ್ಪಕ ನೀರು ಪೂರೈಕೆಗಾಗಿ ಬೀದಿಗಳಲ್ಲಿ ಹೆಚ್ಚುವರಿ ಪೈಪ್‌ಲೈನ್ ಅಳವಡಿಸಲು ಆದೇಶವಾಗಿದ್ದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಮಗಾರಿ ನಡೆದಿಲ್ಲ. ಕೂಡಲೇ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.
ತಾಲೂಕು ಪಂಚಾಯಿತಿ ಇಒ ಸತೀಶ್ ಸ್ಥಳಕ್ಕಾಗಮಿಸಿ ನಾಳೆಯಿಂದ ಗುಳಘಟ್ಟ ಗ್ರಾಮದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಸಂಘಟನೆಯ ತಾಲೂಕು ಅಧ್ಯಕ್ಷೆ ಸುಶೀಲಾ, ಜಯಶೀಲಾ, ಕಾರ್ಯದರ್ಶಿ ರತ್ನಮ್ಮ, ತಾಯಮ್ಮ, ಜಯಮ್ಮ, ಡಿವೈಎಫ್‌ಐ ಮುಖಂಡ ಚಿಕ್ಕಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.