

ಮಡಿಕೇರಿ: ಅಂತರರಾಷ್ಟ್ರೀಯ ಮಾತೃಭಾಷಾ ದಿನವಾದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿತು.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪರವರ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ವಿವಿಧ ಬೇಡಿಕೆಗಳ ಪರವಾದ ಘೋಷಣೆಗಳನ್ನು ಪ್ರಮುಖರು ಕೂಗಿ, ಒಟ್ಟು ೨೬ ಹಕ್ಕೊತ್ತಾಯಗಳನ್ನು ಮಂಡಿಸಿತು.
ಈ ಸಂದರ್ಭದಲ್ಲಿ ಎನ್.ಯು.ನಾಚಪ್ಪ ಮಾತನಾಡಿ, ಸಂವಿಧಾನದ ೮ನೇ ಶೆಡ್ಯೂಲ್‌ಗೆ ಕೊಡವ ಭಾಷೆಯನ್ನು ಸೇರಿಸಬೇಕು. ವಿಶ್ವ ಸಂಸ್ಥೆಯ ಅಧಿಕೃತ ಭಾ?ೆಗಳಲ್ಲೊಂದಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ಅವರು, ಒಂದು ಜನಾಂಗದ ಉಳಿವಿಗೆ ಭಾಷೆಯ ಬೆಳವಣಿಗೆಯೂ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಅತ್ಯಂತ ಸೂಕ್ಷ್ಮ ಜನಾಂಗವಾಗಿರುವ ಕೊಡವರ ಮಾತೃಭಾಷೆ ಕೊಡವ ತಕ್‌ಗೆ ಸಂವಿಧಾನದ ಭದ್ರತೆ ನೀಡಬೇಕು. ಕೊಡವ ಭಾಷೆಯನ್ನು ಅಧಿಕೃತವೆಂದು ಘೋಷಿಸಿ ಕೊಂಕಣಿ ಭಾಷೆಯ ಮಾದರಿಯಲ್ಲಿ ರಾಜ್ಯದ ೩ನೇ ಆಡಳಿತ ಭಾಷೆಯನ್ನಾಗಿ ಮಾಡಬೇಕು. ಸಂವಿಧಾನದ ೩೪೫, ೩೫೦, ೩೫೦ ಎ, ೩೫೦ ಬಿ ವಿಧಿಯಡಿ ೧ನೇ ತರಗತಿಯಿಂದಲೇ ಪಠ್ಯಕ್ರಮದಲ್ಲಿ ಕೊಡವ ತಕ್‌ನ್ನು ಕಡ್ಡಾಯಗೊಳಿಸಬೇಕು. ವಿಶ್ವಸಂಸ್ಥೆಯ ಅಧಿಕೃತ ಭಾಷೆ ಎಂದು ಘೋಷಿಸಬೇಕು. ಕೊಡವ ತಕ್‌ನ್ನು ಯುಎನ್‌ಒ ಅಧಿಕೃತ ಭಾಷೆಗಳಲ್ಲಿ ಒಂದನ್ನಾಗಿ ಮಾಡಬೇಕು. ಭವ್ಯ ಸಂಸ್ಕೃತಿಯ ಕೊಡವ ಜಾನಪದ ಪರಂಪರೆಯನ್ನು ವಿಶ್ವ ಸಂಸ್ಥೆಯ ಯುನೆಸ್ಕೊ ಅಮೂರ್ತ ಸಾಂಸ್ಕೃತಿಕ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಭಾಷಾ ಬುಡಕಟ್ಟು ಜನಾಂಗದ ಗನ್ ಸಂಸ್ಕೃತಿ ಅಂದರೆ ಕೊಡವ ಜನಾಂಗೀಯ ಸಂಸ್ಕಾರವನ್ನು ಸಿಖ್ಖರ ಕಿರ್ಪಾನ್‌ಗೆ ಸಮಾನವಾಗಿ ನಮ್ಮ ಸಂವಿಧಾನದ ೨೫ ಮತ್ತು ೨೬ ನೇ ವಿಧಿಯಡಿ ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಬಿ.ಎಮ್. ಪಾರ್ವತಿ, ಕೂಪದಿರ ಪು?್ಪಾ ಮುತ್ತಣ್ಣ, ಚೋಳಪ್ಪಂಡ ಜ್ಯೋತಿ ನಾಣಯ್ಯ, ಅರೆಯಡ ಸವಿತ, ಬೊಟ್ಟಂಗಡ ಸವಿತಾ ಗಿರೀಶ್, ಕಲಿಯಂಡ ಪೃಕಾಶ್, ಜಮ್ಮಡ ಮೋಹನ್, ಬಾಚರಣಿಯಂಡ ಚಿಪ್ಪಣ್ಣ, ಚಂಬಂಡ ಜನತ್, ಅರೆಯಡ ಗಿರೀಶ್, ಕಿರಿಯಮಾಡ ಶರಿನ್, ಬೇಪಡಿಯಂಡ ದಿನು, ಅಜಿನಿಕಂಡ ಸನ್ನಿ ಮಾಚಯ್ಯ ಮತ್ತಿತರರು ಪಾಲ್ಗೊಂಡು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಕೊಡವ, ಕೊಡವತಿಯರು ಸಂವಿಧಾನಿಕ ಹಕ್ಕೊತ್ತಾಯಗಳ ಸಾಧನೆಗಾಗಿ ಗುರು-ಕಾರೋಣ, ಧಾರ್ಮಿಕ ಸಂಸ್ಕಾರ ಕೋವಿ, ಸೂರ್ಯ-ಚಂದ್ರ, ಭೂದೇವಿ, ದೈವಿಕ ಜಲದೇವಿ ಕಾವೇರಿ ಮತ್ತು ವನದೇವತೆ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.