ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಲು ಒತ್ತಾಯಿಸಿ ಪ್ರತಿಭಟನೆ

raichur
raichur
Published on

ರಾಯಚೂರು ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಜಾರಿಗೊಳಿಸುವುದು ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಐಯುಟಿಸಿ ಸಂಘಟನೆ ಪದಾಧಿಕಾರಿಗಳು ನೇತೃತ್ವದಲ್ಲಿ ಬುಧವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಟಿಪ್ಪು ಸುಲ್ತಾನ ಉದ್ಯಾನವದ ವರೆಗೆ ಪ್ರತಿಭಟನೆ ಮಾಡಿದರು.

ಹಾಸ್ಟೆಲ್, ವಸತಿ ಶಾಲೆ, ವಸತಿ ನಿಲಯ, ವಿವಿಧೆಡೆಯಲ್ಲಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹೊರಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ, ಕಾರ್ಮಿಕರ ಸೇವೆಯನ್ನು ಖಾಯಂ ಮಾಡಿ. ಅಲ್ಲಿವರೆಗೂ ಇಲಾಖೆಗಳಿಂದಲೇ ನೇರವಾಗಿ ಸಮಾನ ಕೆಲಸಕ್ಕೆ ಸಮಾನ ವೇತನ ಪಾವತಿಸಿ ಮತ್ತು ಸೇವಾಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು.

ಜಿಲ್ಲೆಗಳಲ್ಲಿ ವಿವಿದೊದ್ದೇಶ ಕಾರ್ಮಿಕರ ಸಹಕಾರ ಸಂಘ ರಚಿಸಲು ಕೂಡಲೇ ಕ್ರಮಕೈಗೊಳ್ಳಬೇಕು. ಎಲ್ಲಾ ಕೌಶಲ್ಯರಹಿತ ಕಾರ್ಮಿಕರಿಗೆ ಕನಿಷ್ಠ ವೇತನ 35,950 ರೂ. ನಿಗದಿಪಡಿಸಬೇಕು. ಕನಿಷ್ಠ ವೇತನ ಹೆಚ್ಚಳ ಕುರಿತ ರಾಜ್ಯ ಸರ್ಕಾರದ ಅಧಿ ಸೂಚನೆ ಕೂಡಲೆ ಜಾರಿಯಾಗಬೇಕು. ಸರ್ಕಾರಿ ಆದೇಶವಾಗಿ ಮಾರ್ಪಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ಪ್ರಾರಂಭಿಸಬೇಕು. ಕಾರ್ಮಿಕರಿಗೆ ಹಾಗೂ ಅವರ ಕುಟುಂಬಗಳಿಗೆ ಇಎಸ್‌ಐ ಸೌಲಭ್ಯ ದೊರೆಯುವಂತೆ ಸಮರ್ಪಕ ಕ್ರಮಕೈಗೊಳ್ಳಬೇಕು. ಪಿಎಫ್, ಇಎಸ್‌ಐ ಅರ್ಹ ವೇತನ ಮಿತಿಯನ್ನು ಹೆಚ್ಚಿಸಿ, ಎಲ್ಲರಿಗೂ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.

2017ರ ನಂತರ ಆರಂಭಗೊಂಡ ಎಲ್ಲಾ ವಸತಿ ಶಾಲೆ, ಕಾಲೇಜುಗಳಿಗೆ 11 ಜನ ಅಡುಗೆ ಸಿಬ್ಬಂಧಿಯವರನ್ನು ನೇಮಕ ಮಾಡಬೇಕು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘಟನೆ ರಾಜ್ಯ ಉಪಾಧ್ಯಕ್ಷ ಎನ್.ಎಸ್.ವೀರೇಶ, ಜಿಲ್ಲಾಧ್ಯಕ್ಷ ತಿರುಮಲರಾವ್, ಉಪಾಧ್ಯಕ್ಷ ಅಣ್ಣಪ್ಪ, ಜಿಲ್ಲಾ ಕಾರ್ಯದರ್ಶಿ ಮಹೇಶ ಚೀಕಲಪರ್ವಿ, ಸಲೀಂ, ಕರಿಲಿಂಗ, ವೆಂಕಯ್ಯ, ಗಾಯತ್ರಿ, ಹುಲಿಗೆಪ್ಪ, ನಾಗರಾಜ, ಹನುಮರೆಡ್ಡಿ, ಮಹೇಶ ಸೇರಿದಂತೆ ಅನೇಕ ಕಾರ್ಮಿಕ ಸಂಘಗಳ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net