

ಮಂಡ್ಯ: ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬುಧವಾರ ಮಾದಿಗರ ಒಳಮೀಸಲಾತಿ ಜಾರಿಗಾಗಿ ಹೋರಾಟ ಸಮಿತಿ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಜಮಾಯಿಸಿದ ಕಾರ್ಯಕರ್ತರು ಹೆದ್ದಾರಿ ಮೂಲಕ ತಮಟೆ ಬಾರಿಸುವುದರೊಂದಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪರಿಶಿಷ್ಟರಿಗೆ ಒಳ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಆದರೂ ನಮ್ಮ ಮನವಿಗೆ ಸ್ಪಂದನೆ ಸಿಕ್ಕಿಲ್ಲ. ಕಳೆದ 30 ವರ್ಷದಿಂದ ಸರ್ಕಾರ ನಿರ್ಲಕ್ಷೃ ವಹಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಮೂರ್ತಿ ಎ.ಜೆ.ಸದಾಶಿವ ನೇತೃತ್ವದಲ್ಲಿ ಸದಾಶಿವ ಆಯೋಗವನ್ನು 2005 ರಲ್ಲಿ ರಚನೆ ಮಾಡಿ ಸದರಿ ಸದಾಶಿವ ಆಯೋಗವು ತನ್ನ ಸಂಪೂರ್ಣ ವರದಿಯನ್ನು 2012ರಲ್ಲಿ ಜಾರಿ ಮಾಡಿ, ಅಂದಿನ ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡ ಅವರಿಗೆ ವರದಿ ಸಲ್ಲಿಸಿದೆ. ಇಷ್ಟು ವರ್ಷ ಆಡಳಿತ ನಡೆಸಿದ ಸರ್ಕಾರಗಳು ಸದಾಶಿವ ಆಯೋಗದ ವರದಿ ಜಾರಿ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಎನ್.ಆರ್.ಚಂದ್ರಶೇಖರ್, ಸಿ.ಕೆ.ಪಾಪಯ್ಯ, ಶಂಕರಪ್ರಸಾದ್, ಬಿ.ಕೃಷ್ಣ, ಅನ್ನದಾನಿ, ನಂಜುಂಡ ಮೌರ್ಯ, ಕನ್ನಲಿ ಪುಟ್ಟಸ್ವಾಮಿ, ವಿಜಯಕುಮಾರ್, ನಂಜುಂಡಸ್ವಾಮಿ, ಎಚ್.ಸಿ.ಶ್ಯಾಂಪ್ರಸಾದ್, ಶಿವರಾಜ ಮರಳಿಗ, ಕೆಂಪಯ್ಯ, ಕೃಷ್ಣ, ಅವಿನಂದನ್, ತಿಮ್ಮೇಶ್, ಚಾಮನಹಳ್ಳಿ ಮಂಜು ಇತರರಿದ್ದರು.