

ಚಿಕ್ಕಮಗಳೂರು: ಪರಿಶಿಷ್ಟ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯಂತೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಹೋರಾಟ ಸಮಿತಿ ಮುಖ್ಯಸ್ಥ ವಸಂತ್ ಕುಮಾರ್, ಸರ್ಕಾರ ಒಳಮೀಸಲಾತಿ ಜಾರಿಗೆ ಲಾಭ-ನಷ್ಟ ಪರಿಗಣಿಸದೇ ಕೇಂದ್ರ ಸರ್ಕಾರಕ್ಕೆ ವರದಿ ಒಪ್ಪಿಸುವ ಗೋಜಿಗೆ ಹೋಗದೇ ಸಾಮಾಜಿಕ ನ್ಯಾಯಕ್ಕಾಗಿ ನ್ಯಾ.ಎ.ಜೆ.ಸದಾಶಿವ ವರದಿ ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಏಳು ನ್ಯಾಯಮೂರ್ತಿಗಳ ಸರ್ವೋಚ್ಚ ನ್ಯಾಯಾಲಯದ ಸಂವಿಧಾನಿಕ ಪೂರ್ಣಪೀಠ ಒಳಮೀಸಲಾತಿ ನೀಡುವ ಸಂವಿಧಾನಿಕ ಅಧಿಕಾರ ಆಯಾ ರಾಜ್ಯಕ್ಕಿದೆ ಎಂದು ಐತಿಹಾಸಿಕ ತೀರ್ಪು ನೀಡಿರುವ ಹಿನ್ನೆ ಲೆಯಲ್ಲಿ ತೀರ್ಪನ್ನು ಪ್ರಶ್ನಿಸಿದ ಅರ್ಜಿ ಕೂಡಾ ವಜಾಗೊಂಡಿದೆ ಎಂದು ಹೇಳಿದರು.
ದೇಶದ ವಿವಿಧ ರಾಜ್ಯಗಳಲ್ಲಿ ಪರಿಶಿಷ್ಟರ ಮೀಸಲಾತಿ ಸೌಲಭ್ಯ ಪಡೆಯುವಲ್ಲಿ ವಂಚಿತ ವರ್ಗ ಹಾಗೂ ಮೀಸಲಾತಿಯ ಲಾಭ ಹೆಚ್ಚು ಪಡೆದುಕೊಳ್ಳುತ್ತಿರುವ ವರ್ಗಗಳನ್ನು ಗಮನಿಸಿದ ಪರಿಶಿಷ್ಟ ಜಾತಿಯ ಅನೇಕ ಸಂಘಟನೆಗಳು ಮೀಸಲಾತಿಯುನ್ನು ಆಯಾ ಜಾತಿ ಜನಸಂಖ್ಯೆಗೆ ಅನುಗುಣವಾಗಿ ವಿಭಜನೆ ಮಾಡಿ ಒಳ ಮೀಸಲಾತಿ ನೀಡಬೇಕು ಎಂದರು.
ಒಳಮೀಸಲಾತಿ ಜಾರಿ ಸಂಬAಧ ದೇಶಾದ್ಯಂತ ತೀವ್ರತರ ಹೋರಾಟಗಳು ನಡೆದಿವೆ. ಈಗಾಗಲೇ ಪಂಜಾಬ್, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿಯಾಗಿದೆ ಆದರೂ ಅವುಗಳ ವಿರುದ್ಧ ಕೆಲವು ವ್ಯಕ್ತಿಗಳು ನ್ಯಾಯಾಲಯದ ಮೆಟ್ಟಿಲು ಏರಿರುವ ಕಾರಣ ಅಲ್ಪಾವಧಿಗೆ ಸೀಮಿತವಾಗಿದೆ ಎಂದು ತಿಳಿಸಿದರು.
ರಾಜ್ಯ ಮಾದಿಗ ಸಂಘಟನೆ, ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು ಕಳೆದ ಎರಡುವರೆ ದಶಕ ಗಳಿಂದ ಒಳಮೀಸಲಾತಿಗಾಗಿ ತೀವ್ರ ಹೋರಾಟ ನಡೆಸಿಕೊಂಡು ಬಂದಿದೆ. ಈ ಪ್ರತಿಫಲವಾಗಿ ೨೦೦೫ರಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಕಮಿಟಿ ಸದಸ್ಯರು ಜಾತಿಗಣತಿ ಆಧಾ ರದ ಮೇಲೆ ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಭಜಿಸಿ ವೈಜ್ಞಾನಿಕವಾಗಿ ಆಯಾ ಜಾತಿ ಗಳು ಮೀಸಲಾತಿ ವಾಸ್ತವ ಅಂಕಿ ಅಂಶಗಳನ್ನು ಗುರುತಿಸಿವೆ ಎಂದರು.
ಆ ನಿಟ್ಟಿನಲ್ಲಿ ಆಯಾ ಜಾತಿಗಳ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆಗೊಳಿಸಿ ೨೦೧೨ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಈ ಹಿಂದೆ ೨೦೨೩ರ ಚುನಾವಣೆ ಸಂದರ್ಭದಲ್ಲಿ ಅಂದಿನ ಸರ್ಕಾರ ವರದಿಯ ನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿರುತ್ತಾರೆ. ಚುನಾವಣೆ ವೇಳೆಯಲ್ಲಿ ಎಲ್ಲಾ ರಾಜಕೀಯ ಪಕ್ಷ ಗಳು ಒಳಮೀಸಲಾತಿ ಜಾರಿಗೊಳಿಸುವ ಭರವಸೆ ನೀಡಿದ್ದರು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಹಾಲಪ್ಪ, ಚಂದ್ರಪ್ಪ, ಶೂದ್ರ ಶ್ರೀನಿವಾಸ್, ಎಸ್ಸಿ, ಎಸ್ಟಿ ದೌರ್ಜನ್ಯ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷö್ಮಣ್, ಡಿಎಸ್‌ಎಸ್ ಮುಖಂಡರಾದ ಬಿ.ಎನ್.ಚೌಡಪ್ಪ, ಮರ್ಲೆ ಅಣ್ಣಯ್ಯ, ಮೋಹನ್ ಕುಮಾರ್, ಬಿಳೇಕಲ್ಲು ಬಾಲಕೃಷ್ಣ, ಕುರುವಂಗಿ ವೆಂಕಟೇಶ್, ಕೆ.ಟಿ.ರಾಧಾಕೃಷ್ಣ, ದಂಟರಮಕ್ಕಿ ಶ್ರೀನಿವಾಸ್, ಕೋಟೆ ಜಗದೀಶ್, ಹರೀಶ್ ಮಿತ್ರ, ಹೊನ್ನೇಶ್ ಮತ್ತಿತರರಿದ್ದರು.