

ರಾಯಚೂರು ಕಟ್ಟಡ ಕಾರ್ಮಿಕರಿಗೆ ಅನಾವಶ್ಯಕ ಯೋಜನೆಗಳನ್ನು ಕೈಬಿಟ್ಟು ಮೂಲಭೂತ ಯೋಜನೆಗಳನ್ನು ಜಾರಿ ಮಾಡಲು ಒತ್ತಾಯಿಸಿ ಜಿಲ್ಲಾ ಕಾರ್ಮಿಕ ಇಲಾಖೆ ಕಚೇರಿ ಮುಂದೆ ಸೋಮವಾರ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ಮಾಡಿದರು.
ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಮೂಲ ಯೋಜನೆಗಳಾದ ಶೈಕ್ಷಣಿಕ ಸಹಾಯಧನ ಹೆಚ್ಚಳ ಮಾಡಬೇಕು, ಈ ಹಿಂದೆ ಇರುವ ಸಹಾಯಧನವನ್ನು ಮರು ಸ್ಥಾಪಿಸಬೇಕು. ವೈದ್ಯ ಮದುವೆ. ಹೆರಿಗೆ, ಪಿಂಚಣಿ, ಮರಣ ಹೊಂದಿದ ವೇಳೆ ಅಂತಿಮ ಸಂಸ್ಕಾರಕ್ಕಾಗಿ ಯೋಜನೆಯ ಸಹಾಯಧನ ವನ್ನು ಹೆಚ್ಚಿಸಬೇಕು ಹಾಗೂ ಇನ್ನಿತರ ಮೂಲಭೂತ ಯೋಜನೆಗಳಿಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಅನಾವಶ್ಯಕ ಹೆಲ್ತ್ ಕ್ಯಾಂಪ್, ಸಂಚಾರಿ ಕ್ಲಿನಿಕ್ ಗಳಂತಹ ದುಂದುವೆಚ್ಚದ ಯೋಜನೆಗಳನ್ನು ರದ್ದುಪಡಿಸಬೇಕು. ಖಾಸಗಿಯವರಿಗೆ ಅಂಬೇಡ್ಕರ್ ಸಹಾಯ ಹಸ್ತ ಅಡಿಯಲ್ಲಿ ಸೇವಾ ಕೇಂದ್ರಗಳನ್ನು ಟೆಂಡರ್ ಮೂಲಕ ನೀಡುವುದನ್ನು ತಕ್ಷಣ ರದ್ದುಪಡಿಸಬೇಕು, ಈ ಹಿಂದೆ ಇರುವುದನ್ನೇ ಮುಂದುವರಿಸಬೇಕು. 1,125 ಕೋ. ರೂ. ವೆಚ್ಚದ ಕಟ್ಟಡ
ಕಾರ್ಮಿಕರ ಮಕ್ಕಳಿಗಾಗಿ ಶ್ರಮಿಕ ವಸತಿ ಶಾಲಾ ನಿರ್ಮಾಣ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿಯ ಪದಾಧಿಕಾರಿಗಳಾದ ವೀರನಗೌಡ, ಆನಂದಪ್ಪ, ವೀರಣ್ಣ ಹೊಸೂರು, ರಂಗಪ್ಪ ಅಸ್ಕಿಹಾಳ, ತಿಮ್ಮಪ್ಪ ಸ್ವಾಮಿ ಮಲಿಯಾ ಬಾದ್, ಭೀಮಪ್ಪ, ವೀರೇಶ ಜಾಲಗಾರ, ವೆಂಕಟೇಶ್ ರಾಠೋಡ್, ನಾಗರಾಜ, ಟಿ.ವಾಸು ಸೇರಿದಂತೆ ಅನೇಕರು ಇದ್ದರು.